ಬೆಳ್ಳಂಬೆಳಗ್ಗೆಯೇ ಬೆಂಗಳೂರಿನಲ್ಲಿ ಶೂಟೌಟ್: ಖಾರದ ಪುಡಿ ಎರಚಿ ಪರಾರಿಯಾಗಲೆತ್ನಿಸಿದ್ದ ಕೊಲೆ ಆರೋಪಿ

Shootout vvani
Published on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆಯೇ ಪೊಲೀಸರು ಶೂಟೌಟ್ ನಡೆಸಿದ್ದಾರೆ. ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಲಿಡ್ಕರ್ ಕಾಲನಿಯಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಕೊಲೆ ಆರೋಪಿಯನ್ನು ಬಂಧಿಸಲು ಹೋದಾಗ ಈ ಶೂಟೌಟ್ ನಡೆದಿದೆ. ​

ಎರಡು ದಿನಗಳ ಹಿಂದೆ ನಡೆದ ರೌಡಿಶೀಟರ್ ಬಿಜು ಅಲಿಯಾಸ್ ಬಾಗಲೂರು ಲೇಔಟ್​ನ ಬುಜ್ಜಿ (30) ಹತ್ಯೆ ಪ್ರಕರಣದ ಆರೋಪಿ ಸಂಜಯ್​ ಅಲಿಯಾಸ್ ಆ್ಯಂಡ್ರೂಸ್​ನನ್ನು ಬಂಧಿಸಲು ಸೋಮವಾರ ನಸುಕಿನ ವೇಳೆ ಕಾರ್ಯಾಚರಣೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಖಾರದ ಪುಡಿ ಎರಚಿ ಪರಾರಿಯಾಗಲು ಸಂಜಯ್ ಪ್ರಯತ್ನಿಸಿದ್ದ. ಕೂಡಲೇ ಇನ್​ಸ್ಪೆಕ್ಟರ್ ಅಜಯ್ ಸಾರಥಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಇದಕ್ಕೆ ಸಂಜಯ್​ ಸ್ಪಂದಿಸದೇ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದ. ಹೀಗಾಗಿ ಶೂಟೌಟ್ ನಡೆಸಿದ್ದು, ಆರೋಪಿ ಕಾಲಿಗೆ ಗುಂಡು ತಗುಲಿದ್ದು ಓಡಲಾಗದೆ ಬಿದ್ದು ಬಿಟ್ಟಿದ್ದ. ಕೂಡಲೇ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವ ಕೊಲೆ ಪ್ರಕರಣ: ಕ್ಷುಲ್ಲಕ ವಿಚಾರಕ್ಕೆ ಎದುರಾಳಿ ಡ್ಯಾನಿಯಲ್ ಗ್ಯಾಂಗ್ ಜತೆ ಗಲಾಟೆ ಮಾಡಿಕೊಂಡಿದ್ದ ಬಾಗಲೂರು ಲೇಔಟ್‌ನ ಬುಜ್ಜಿ (30) ಕೊಲೆಯಾದ ರೌಡಿ. ಶನಿವಾರ (ಮೇ.2) ರಾತ್ರಿ 9 ಗಂಟೆಯಲ್ಲಿ ಎದುರಾಳಿ ಗ್ಯಾಂಗ್‌ನವರು ಮಾರಕಾಸಗಳಿಂದ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಕಾಡುಗೊಂಡನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬುಜ್ಜಿ ಕ್ಷುಲ್ಲಕ ವಿಚಾರಕ್ಕೆ ಎದುರಾಳಿ ಡ್ಯಾನಿಯಲ್ ಗ್ಯಾಂಗ್ ಜತೆ ಗಲಾಟೆ ಮಾಡಿಕೊಂಡಿದ್ದರು. ಕೆಲ ತಿಂಗಳ ಹಿಂದೆ ಡ್ಯಾನಿಯಲ್‌ನ ಸಂಬಂಧಿಕ ಸ್ಟಾಲಿನ್ ಎಂಬುವನ್ನು ಕೊಲೆ ಮಾಡಿದ್ದರು. ಇದೇ ದ್ವೇಷಕ್ಕೆ ಡ್ಯಾನಿಯಲ್ ಕಡೆಯವರು ಬುಜ್ಜಿಯ ಸಹೋದರ ವಿನೋದ್ ಎಂಬಾತನ ಮೇಲೆ ಮಾರಕಾಸಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಬಳಿಕ ಎರಡು ಗ್ಯಾಂಗ್‌ನವರು ರಾಜೀ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಬುಜ್ಜಿ ಕೊಲೆಯಾಗಿದೆ.

ಡ್ಯಾನಿಯಲ್ ಗ್ಯಾಂಗ್ ಮೇಲೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ನಾಲ್ಕೈದು ಮಂದಿ ದುಷ್ಕರ್ಮಿಗಳು ಮನೆ ಬಳಿಯಿದ್ದ ಬುಜ್ಜಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವುದು ಗೊತ್ತಾಗಿದೆ. ಕೆಲವರ ಮುಖಚಹರೆಯನ್ನು ಪೊಲೀಸರು ಗುರುತಿಸಿಕೊಂಡಿದ್ದರು. ಅದರಂತೆ ಕಾರ್ಯಾಚರಣೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net