

ತುಮಕೂರು: ಮಾರಣಾಂತಿಕ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ಸರಗಳ್ಳನ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ.
ಆಂಧ್ರಪ್ರದೇಶದ ಹಿಂದೂಪುರ ಮೂಲದ ರಿಜ್ವಾನ್ (34) ಎಂಬಾತನ ಕಾಲಿಗೆ ಮಧುಗಿರಿ ತಾಲೂಕಿನ ಈಜೀಹಳ್ಳಿ ಕ್ರಾಸ್ ಬಳಿ ಸೋಮವಾರ ಮಧ್ಯಾಹ್ನ 1.40ರಲ್ಲಿ ಪೊಲೀಸರು ಗುಂಡಿಕ್ಕಿದ್ದಾರೆ. ಹೊಸಕೋಟೆ ಬಳಿ ಸೆರೆ ಸಿಕ್ಕ ರಿಜ್ವಾನ್ನನ್ನು ಮಧುಗಿರಿಗೆ ಕರೆತರುವಾಗ ಈಜೀಹಳ್ಳಿ ಕ್ರಾಸ್ ಬಳಿ ಬಹಿರ್ದೆಸೆಗೆ ಹೋಗಲು ಜೀಪ್ನಿಂದ ಇಳಿದಿದ್ದ. ಈ ವೇಳೆ ಸ್ಥಳದಲ್ಲಿ ಬಿದ್ದಿದ್ದ ಬೀರುಬಾಟಲ್ ಚೂರು ತೆಗೆದು ಪೇದೆ ರಮೇಶ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಆತ್ಮರಕ್ಷಣೆಗೆ ಇನ್ಸ್ಪೆಕ್ಟರ್ ಹನುಮಂತರಾಯಪ್ಪ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ನಂತರ ಆರೋಪಿ ರಿಜ್ವಾನ್ಗೆ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ.
ಒಟ್ಟು 15 ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಲ್ಲಿ ಭಾಗಿಯಾಗಿದ್ದ ಆರೋಪಿ ರಿಜ್ವಾನ್ ಹೊಸಕೋಟೆಯಲ್ಲಿರುವ ಮಾಹಿತಿಯನ್ನು ಮತ್ತೊಬ್ಬ ಆರೋಪಿ ಚಿನ್ನಾ ನೀಡಿದ್ದ. ಈ ಹಿನ್ನೆಲೆಯಲ್ಲಿ
ಮಧುಗಿರಿ ಡಿವೈಎಸ್ಪಿ ಪಿ.ರಾಮಂದ್ರಪ್ಪ ಮಾರ್ಗದರ್ಶನದಲ್ಲಿ ಸಿಪಿಐ ಹನುಮಂತರಾಯಪ್ಪ, ಮಿಡಿಗೇಶಿ ಸಬ್ ಇನ್ಸ್ಪೆಕ್ಟರ್ ಅಮ್ಮನಗಿ, ಪೇದೆಗಳಾದ ರಮೇಶ್, ಪ್ರಕಾಶ್ ಮತ್ತು ಮುತ್ತರಾಜ್ ತಂಡ ತೆರಳಿತ್ತು.