ಅಕ್ರಮ ಅಕ್ಕಿ ಸಿಲಿಂಡರ್ ವಶಪಡಿಸಿಕೊಂಡ ಪೊಲೀಸರು

lpg-price-today-express-archive-1200
Published on

ರಾಮನಗರ: ಅಕ್ರಮವಾಗಿ ಸಾಗಾಟಾ ಮಾಡುತ್ತಿದ್ದ 2830 ಕೆಜಿ ಅಕ್ಕಿಯನ್ನು ರಾಮನಗರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ತಾಲೂಕು ಕೈಲಾಂಚ ಹೋಬಳಿಯ ನಾಗೋಹಳ್ಳಿ ಗೇಟ್ ಬಳಿ ನಡೆದಿದೆ.

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ಸಾಗಿಸಲಾಗುತ್ತಿರುವ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಸಿದ್ದರಾಜು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಅಕ್ಕಿ ಮತ್ತು ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಗೂಡ್ಸ್ ವಾಹವನ್ನು ವಶಪಡಿಸಿಕೊಂಡು, ಚಾಲಕ ಮತ್ತು ಲಾರಿಯ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿದ್ದರಾಜು ಮತ್ತು ತಂಡ ನಾಗೋಹಳ್ಳಿ ಗೇಟ್ ಬಳಿ ಕಾಯುತ್ತಿದ್ದ ವೇಳೆ ರಾಮನಗರ- ಹುಣಸಹಳ್ಳಿ ಮಾರ್ಗವಾಗಿ ಹೋಗುತ್ತಿದ್ದ ಗೂಡ್ಸ್ ವಾಹನವನ್ನು ತಡೆಯುತ್ತಿದ್ದಂತೆ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ನಂತರ ಪರಿಶೀಲನೆ ಮಾಡಲಾಗಿ 45 ಅಕ್ಕಿ ಮೂಟೆಯಲ್ಲಿದ್ದ 2830 ಕೆಜಿ ಅಕ್ಕಿ ಪತ್ತೆಯಾಗಿದೆ.

ಸಿಲಿಂಡರ್ ವಶ: ಗೃಹ ಬಳಕೆಯ ಗ್ಯಾಸ್ ಅನ್ನು ಅಕ್ರಮವಾಗಿ ಬೇರೊಂದು ಸಿಲಿಂಡರ್‌ಗೆ ವರ್ಗಾವಣೆ ಮಾಡಿ ಸಾಗಾಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ವಿವಿಧ ಕಂಪನಿಗಳಿಗೆ ಸೇರಿದ 35 ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮನಹಳ್ಳಿ ಟೋಲ್ ಬಳಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಕಗ್ಗಲೀಪುರ ಪೊಲೀಸರು ಕನಕಪುರದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನವನ್ನು ತಡೆದು ತಪಾಸಣೆ ಮಾಡಲಾಗಿದೆ. ಈ ವೇಳೆ ವಾಹನದಲ್ಲಿ ಇದ್ದವರು ಅಗತ್ಯ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿದಾಗ ಗ್ಯಾಸ್ ಫಿಲಿಂಗ್ ದಂಧೆ ಬೆಳಕಿಗೆ ಬಂದಿದೆ.

ಕನಕಪುರ ತಾಲೂಕಿನ ಕಾಡಹಳ್ಳಿ ಗ್ರಾಮದ ಜಮೀನೊಂದರಲ್ಲಿ ಗ್ಯಾಸ್ ಫಿಲಿಂಗ್ ಮಾಡಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ವಾಹನದಲ್ಲಿ ಇದ್ದವರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕನಕಪುರ ತಾಲೂಕು ಕಾಡಹಳ್ಳಿ ಗ್ರಾಮದ ನಾಗರಾಜು, ಸಿದ್ದೇಗೌಡ, ಶ್ರೀಧರ್ ಎನ್ನುವರ ವಿರುದ್ಧ ಕಗ್ಗಲೀಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net