ಅಂಧ ದಂಪತಿಯ ಕುಟುಂಬಕ್ಕೆ ಪೊಲೀಸ್​ ಅಧಿಕಾರಿಯ ಸಹಾಯಹಸ್ತ

manu
Published on

ಬೆಂಗಳೂರು : ಎರಡು ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಅಂಧ ದಂಪತಿಗೆ ನಗರದ ಪೊಲೀಸ್​ ಅಧಿಕಾರಿಯೊಬ್ಬರು ಹಲವು ತಿಂಗಳಿಗೆ ಸಾಕಾಗುವಷ್ಟು ದಿನಸಿ ಪದಾರ್ಥಗಳನ್ನು ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಕಾಣದ ವೈರಿ ಕರೊನಾ ವೈರಸ್​ ಮನುಕುಲದ ಮೇಲೆ ಆಕ್ರಮಣ ನಡೆಸಿರುವಾಗ, ಈ ಕಾರ್ಯವು, ಸಮಾಜ ಒಟ್ಟಾಗಿ ಈ ಸಂಕಷ್ಟದಿಂದ ಹೊರಬರಲು ಪ್ರೇರಕವಾಗಿದೆ.

ಬಸವರಾಜು ಮತ್ತು ಚಿನ್ನಮ್ಮ ದಂಪತಿ ಇಬ್ಬರೂ ಅಂಧರು. ಇವರಿಗೆ ಸಾಗರ್(2 ವರ್ಷ) ಮತ್ತು ಸಮರ್ಥ್(6 ತಿಂಗಳು) ಎಂಬ ಇಬ್ಬರು ಗಂಡು ಮಕ್ಕಳು. ಇಂದು ಬೆಳಿಗ್ಗೆ ವಿಜಯನಗರ ಪೊಲೀಸ್​ ಸಬ್​ಇನ್ಸ್​ಪೆಕ್ಟರ್ ಮನು ಅವರು ಠಾಣೆಗೆ ಕರ್ತವ್ಯಕ್ಕೆ ಬಂದಾಗ, ಠಾಣೆಯ ಹೊರಗಡೆ ಅಸಹಾಯಕರಾಗಿ ನಿಂತಿದ್ದರು. ಅವರ ಸಮಸ್ಯೆ ಏನೆಂದು ವಿಚಾರಿಸಿದಾಗ, ಒಂದು ಹೊತ್ತಿನ ತುತ್ತಿಗೂ ಕಷ್ಟಪಡುತ್ತಿರುವ ಪರಿಪಾಟಲು ತಿಳಿದುಬಂದಿದೆ.

ಇವರ ಪರಿಸ್ಥಿತಿಗೆ ಸ್ಪಂದಿಸಿರುವ ಪಿಎಸ್​ಐ ಮನು, ಕೆಲವು ತಿಂಗಳುಗಳಿಗೆ ಆಗುವಷ್ಟು ದಿನಸಿ ಪದಾರ್ಥಗಳಾದ 50 ಕೆಜಿ ಅಕ್ಕಿ, 10 ಕೆಜಿ ಬೇಳೆ, 5 ಕೆಜಿ ಗೋಧಿ ಹಿಟ್ಟು, 10 ಲೀಟರ್ ಎಣ್ಣೆ, 12 ಮೈಸೋಪು, 12 ಬಟ್ಟೆಸೋಪು, 10 ಕೆಜಿ ಸಕ್ಕರೆ, 2 ಕೆಜಿ ಟೀಪುಡಿ, 1 ಕೆಜಿ ಹಾಲಿನ ಪೌಡರ್, ಒಂದು ಬಂಡಲ್ ಬಿಸ್ಕೆಟ್, ಮಗುವಿಗೆ ಡೈಪರ್, ಗ್ರೈಪ್ ವಾಟರ್, ಮಕ್ಕಳಿಗೆ ಬೇಕಾದ ಔಷಧಿಗಳು ಎಲ್ಲವನ್ನೂ ಸ್ವಂತ ಹಣದಲ್ಲಿ ಕೊಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net