

ಪೊಲೀಸ್ ಇಲಾಖೆ ನಡೆಗೆ ಸಾರ್ವಜನಿಕ ವಲಯದಲ್ಲಿ ಭೀತಿ
ಪುರ ಠಾಣೆ ಕ್ರಮಕ್ಕೆ ಸಾರ್ವಜನಿಕರ ಅಸಮಾಧಾನ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಅಪರಾಧ ಪ್ರಕರಣ ಭೇದಿಸಲು ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅತಿಮುಖ್ಯ. ಆದರೆ, ಸಾರ್ವಜನಿಕರ ಸಹಕಾರ ಪಡೆಯಲು ಇಲಾಖೆ ಬೆದರಿಕೆಯೊಡ್ಡುವ ದಾರಿ ಹಿಡಿದಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ಪಬ್ಲಿಕ್ ಸೇಫ್ಟಿ ಆಕ್ಟ್‌ನಡಿ ಚನ್ನಪಟ್ಟಣದ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಮನೆಗಳ ಮಾಲೀಕರಿಗೆ ಕೆಲದಿನಗಳಿಂದ ನೋಟಿಸ್‌ಜಾರಿ ಮಾಡಲಾಗುತ್ತಿರುವುದೇ ವಿವಾದಕ್ಕೆ ಕಾರಣವಾಗಿದ್ದು, ಅದು ನೋಟಿಸ್ ಮಾತ್ರವಾಗಿರದೆ ಬೆದರಿಕೆಯ ಪತ್ರದಂತಿದೆ. ಈ ನೋಟಿಸ್ ಉದ್ದೇಶ ಉತ್ತಮವಾಗಿದ್ದರೂ ಅದರಲ್ಲಿ ಉಲ್ಲೇಖಿಸಿರುವ ಪದಗಳ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಇತ್ತೀಚಿನ ದಿನಗಳಲ್ಲಿ ಬೀಗ ಮುರಿದು ಮನೆ ಕಳ್ಳತನ, ದ್ವಿಚಕ್ರ ವಾಹನ ಕಳವು, ಸರಗಳ್ಳತನ ಪ್ರಕರಣ ಹೆಚ್ಚಾಗಿವೆ. ಆದ್ದರಿಂದ ನಿಮ್ಮ ಮನೆಯ ಸುರಕ್ಷತೆ ದೃಷ್ಟಿಯಿಂದ ಆಯಕಟ್ಟಿನ ಸ್ಥಳದಲ್ಲಿ ಪಬ್ಲಿಕ್ ಸೆಫ್ಟಿ ಆಕ್ಟ್ ಪ್ರಕಾರ ಮುಂಜಾಗ್ರತಾ ಕ್ರಮವಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಚಿನ್ನಾಭರಣ ಮತ್ತು ಇತರ ವಸ್ತುಗಳು ಹಾಗೂ ವಾಹನಗಳ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು.
ಆದ್ದರಿಂದ ಈ ನೋಟಿಸ್ ತಲುಪಿದ 5 ದಿನದ ಒಳಗಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಇದಕ್ಕೆ ತಪ್ಪಿದರೆ 5 ಸಾವಿರ ರೂ. ದಂಡ ವಿಧಿಸಲಾಗುವುದು. ಜತೆಗೆ, ನಿಮ್ಮ ಸ್ಥಳದಲ್ಲಿ ಯಾವುದಾದರೂ ಅನಾಹುತ ನಡೆದರೆ, ಅದಕ್ಕೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕರಿಗೆ ನೀಡಿದ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ನಗರ ವ್ಯಾಪ್ತಿ ಸೇರಿ ತಾಲೂಕಿನಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ. ಈ ಪ್ರಕರಣ ಭೇದಿಸಲು ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅತಿಮುಖ್ಯ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಆದರೆ, ಕಳ್ಳತನ ಪ್ರಕರಣ ಭೇದಿಸಿ, ಪ್ರಕರಣಗಳಿಗೆ ಕಡಿವಾಣ ಹಾಕುವ ಜವಾಬ್ದಾರಿ ಹೊರಬೇಕಾದ ಇಲಾಖೆ, ಈ ರೀತಿ ಸಾರ್ವಜನಿಕರಿಗೆ ಬೆದರಿಕೆ ಒಡ್ಡುವುದು ಸರಿಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಸಿ.ಸಿ. ಕ್ಯಾಮರಾ ಅವಶ್ಯಕವಿರುವುದು ಸತ್ಯ. ಕ್ಯಾಮರಾ ಅಳವಡಿಸಿಕೊಳ್ಳಲು ನೋಟಿಸ್ ನೀಡುವ ಅಗತ್ಯವೇನಿದೆ? ಅಷ್ಟಕ್ಕೂ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ, ನಗರದ ಎಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕರ್ನಾಟಕ ಪಬ್ಲಿಕ್ ಸೇಫ್ಟಿ ಆಕ್ಟ್‌ನಡಿ ಈ ರೀತಿಯಾದ ನೋಟಿಸ್ ನೀಡಲು ಅವಕಾಶ ಇದೆ. ಇದು ಬೆದರಿಸುವ ಯತ್ನವಲ್ಲ. ಈ ರೀತಿಯಾದರೂ, ಸಾರ್ವಜನಿಕರು ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಲು ಮುಂದಾಗಲಿ ಎಂಬುದೇ ನಮ್ಮ ಆಶಯ ಎಂಬುದು ಪೊಲೀಸರ ವಿವರಣೆಯಾಗಿದೆಯಾದರೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಬದಲು ಈ ರೀತಿ ಬೆದರಿಕೆಯ ನೋಟಿಸ್ ಅಗತ್ಯವೇನಿದೆ? ಎಂಬುದು ಜನರ ಪ್ರಶ್ನೆ.
ನಮ್ಮ ಮನೆಗಳ ಹಿತದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವುದು ಒಳೆಯದು. ಆದರೆ, ಇಲಾಖೆ ನಮಗೆ ಈ ರೀತಿ ನೋಟೀಸ್ ನೀಡುವ ಅವಶ್ಯ ಏನಿದೆ?. ಸಿಬ್ಬಂದಿ ಪತ್ರವೊಂದನ್ನು ನೀಡಿ ನನ್ನ ಸಹಿ ಪಡೆದುಕೊಂಡು ಹೋದರು. ಮನೆಗೆ ಹೋಗಿ ನೋಡಿದಾಗಲೇ ಇದು ನೋಟೀಸ್ ಎಂಬುದು ತಿಳಿಯಿತು. ಈ ನೋಟಿಸ್‌ನಲ್ಲಿ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಅಭ್ಯಂತರವಿಲ್ಲ. ಆದರೆ, ಯಾವುದಾದರೂ ಪ್ರಕರಣವಾದರೆ ನಿಮ್ಮನ್ನೇ ಹೊಣೆಮಾಡಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದಿರುವುದು ಸೂಕ್ತವಾಗಿಲ್ಲ. ಇಲಾಖೆಯ ಬಗ್ಗೆ ಅಪಾರವಾದ ಗೌರವವಿದೆ. ಸಾರ್ವಜನಿಕರನ್ನು ಬೆದರಿಸುವ ಬದಲು, ಕಳ್ಳಕಾರರಿಗೆ ಎಡೆಮೂರಿ ಕಟ್ಟಲು ಮುಂದಾಗಲಿ.
ತ್ರೀವೇಣಿ, ನೋಟಿಸ್ ಪಡೆದ ಗೃಹಿಣಿ
ಕಳೆದ ಅಕ್ಟೋಬರ್‌ನಲ್ಲಿ ನಾಲ್ವರು ಚಡ್ಡಿದಾರಿಗಳು (ಅಪರಿಚಿತ ಕಳ್ಳರು) ನಗರದ ಮೆಡಿಕಲ್ ಸ್ಟೋರ್‌ವೊಂದರ ಬಾಗಿಲು ಹೊಡೆದು ಕಳ್ಳತನ ನಡೆಸಿದ್ದರು. ಇದರೊಂದಿಗೆ, ಅದೇ ದಿನ ಆ ತಂಡ ಮತ್ತೊಂದು ಮೆಡಿಕಲ್ ಹಾಗೂ ದಿನಸಿ ಅಂಗಡಿ ಬಾಗಿಲು ಹೊಡೆಯಲು ಯತ್ನ ನಡೆಸಿತ್ತು. ಇವರು ನಗರದ ನ್ಯಾಯಾಲಯದ ಮುಂಭಾಗವೇ ಮೆಡಿಕಲ್ ಬಾಗಿಲು ಹೊಡೆದು ಕಳ್ಳತನ ಮಾಡುತ್ತಿರುವ ದೃಶ್ಯ ಹಾಗೂ ಅವರುಗಳು ನಡೆಸುತ್ತಿದ್ದ ಸಂಭಾಷಣೆಯ ಧ್ವನಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಮಾಧ್ಯಮ ಸೇರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಳ್ಳರ ಮುಖಚಹರೆ ಸಂಪೂರ್ಣ ಸೆರೆಯಾಗಿತ್ತು. ಆದರೆ, ಇದುವರೆಗೂ ಆ ಕಳ್ಳರನ್ನು ಪತ್ತೆಹಚ್ಚುವಲ್ಲಿ ಪುರಠಾಣೆ ಪೊಲೀಸರು ವಿಫಲರಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಸಾರ್ವಜನಿಕರಿಗೆ ಈ ರೀತಿ ನೋಟೀಸ್ ನೀಡುವುದು ಎಷ್ಟು ಸರಿ? ಮೊದಲು ಸಿಸಿ ಕ್ಯಾಮರಾ ಸೆರೆಸಿಕ್ಕವರನ್ನು ಪತ್ತೆಹಚ್ಚಲಿ ಎಂಬುದು ನಗರವಾಸಿಗಳ ಆಗ್ರಗವಾಗಿದೆ.