ಹನೂರಿನಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ

ಹನೂರಿನಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ
Published on

ಹನೂರು: ತಾಲೂಕಿನ ಗಡಿ ಗೋಪಿನಾಥಂ-ಹೊಗೇನಕಲ್ ಮಾರ್ಗದ ಕಾವೇರಿ ವನ್ಯಜೀವಿ ವಲಯದ ಕರಿಕಲ್ಲುಗುಡ್ಡೆ (ಮೇಟ್‌ಕಲ್)ನಲ್ಲಿ ನಿರ್ಮಿಸಿರುವ ಸ್ಮಾರಕದಲ್ಲಿ ಸೋಮವಾರ ಪೊಲೀಸ್ ಹುತಾತ್ಮರ ದಿನ ಆಚರಿಸಲಾಯಿತು.

ಈ ವೇಳೆ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಇನ್ಸ್‌ಪೆಕ್ಟರ್ ಜಗದೀಶ್ 1990ರಲ್ಲಿ ಈ ಭಾಗದಲ್ಲಿ ವೀರಪ್ಪನ್ ಅಟ್ಟಹಾಸ ಮಿತಿಮೀರಿ ಹೋಗಿತ್ತು. ಈ ವೇಳೆ ವೀರಪ್ಪನ್ ಮತ್ತು ಆತನ ಸಹಚರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಧೈರ್ಯ, ಸಾಹಸ ಮೆರೆದು ಪೊಲೀಸ್ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವೀರ ಮರಣ ಹೊಂದಿದರು. ಇವರ ಸ್ಮರಣಾರ್ಥವಾಗಿ ಇಲಾಖೆ ವತಿಯಿಂದ ಸ್ಮಾರಕ ನಿರ್ಮಿಸಲಾಗಿದೆ. ಈ ಸ್ಮಾರಕ ಹುತಾತ್ಮರ ದಕ್ಷತೆಯ ಕಾರ್ಯ ವೈಖರಿ ಇತರರಿಗೆ ಸ್ಪೂರ್ತಿದಾಯಕವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಇವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಕೀರ್ತಿಗಳಿಸಬೇಕು ಎಂದು ತಿಳಿಸಿದರು.

ತಾಲೂಕಿನ ಮಿಣ್ಯಂ ಸಮೀಪದ ಬೂದಿಕೆರೆ ತಿರುವಿನಲ್ಲಿ ನಿರ್ಮಿಸಿರುವ ಹುತಾತ್ಮರ ಸ್ಮಾರಕದಲ್ಲೂ ಪುಷ್ಪ ನಮನ ಹಾಗೂ ಗೌರವ ವಂದನೆ ಸಲ್ಲಿಸುವುದರ ಮೂಲಕ ರಾಮಾಪುರ ಪೊಲೀಸರಿಂದ ಹುತಾತ್ಮರ ದಿನ ಆಚರಿಸಲಾಯಿತು.

ಸಬ್‌ಇನ್ಸ್‌ಪೆಕ್ಟರ್ ಬಸವರಾಜು, ಎಎಸೈ ಗೋವಿಂದರಾಜು, ಲಿಂಗರಾಜು, ಭೈರಪ್ಪ, ಬಂಗಾರು, ಜಯರಾಮು, ಮುರುಗೇಶ್, ರಮೇಶ್, ಸಿದ್ದೇಶ್, ರಘು ರಂಗಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net