

ತುಮಕೂರು: ನಗರಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ವರ್ಗಾವಣೆಗೊಂಡಿರುವ ಸಿಪಿಐ ದಿನೇಶ್ಕುಮಾರ್ಗೆ ಅಭಿನಂದನೆ ಹೆಸರಿನಲ್ಲಿ ಏ.23ರ ರಾತ್ರಿ ರೋಡ್ ಶೋ ನಲ್ಲಿ ಪಟಾಕಿ ಸಿಡಿಸಿ ನಡೆಸಿರುವ ಸಂಭ್ರಮಾಚರಣೆ ತೀವ್ರ ಟೀಕೆಗೆ ಗುರಿಯಾಗಿದೆ.
ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿಗೆ ದೇಶವಾಸಿಗಳು ಬಲಿಯಾದ ಶೋಕದಲ್ಲಿರುವಾಗಲೇ ಹಿತೈಷಿಗಳ ಹೆಸರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ತವರೂರಿನಲ್ಲಿಯೇ ಶಿಸ್ತಿನ ಇಲಾಖೆಯ ಪೊಲೀಸ್ ಅಧಿಕಾರಿ ರಸ್ತೆಯಲ್ಲಿ ಸಂಭ್ರಮಾಚರಣೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕೂಡಲೇ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಬಡ್ತಿ ಹಾಗೂ ನಿವೃತ್ತಿ ಸಮಯದಲ್ಲಿ ಅವರ ಹಿತೈಷಿಗಳ ಹೆಸರಿನಲ್ಲಿ ಸನ್ಮಾನ, ಬಿರುದು ನೀಡುವ ಸಮಾರಂಭಗಳು ಹೆಚ್ಚಾಗುತ್ತಿದ್ದು ಅದರ ಒಂದು ಭಾಗವಾಗಿಯೇ ದಿನೇಶ್ಕುಮಾರ್ಗೆ ಸನ್ಮಾನ ಮಾಡಲಾಗಿದೆ. ಈ ಸಮಾರಂಭದಲ್ಲಿ ಕೆಲವು ಪುಡಿ ಪುಡಾರಿಗಳು, ರೌಡಿಶೀಟರ್ಗಳು, ರಿಯಲ್ ಎಸ್ಟೇಟ್ ಮಧ್ಯವರ್ತಿಗಳು ಭಾಗಿಯಾಗಿದ್ದರು ಎನ್ನಲಾಗಿದೆ.
ತೆರೆದ ಜೀಪ್ನ ಮೆರವಣಿಗೆಯಲ್ಲಿ ದಿನೇಶ್ಕುಮಾರ್ ಅವರನ್ನು ಕಾರ್ಯಕ್ರಮ ನಡೆದ ಸ್ಥಳಕ್ಕೆ ಕರೆತಂದ ಅಭಿಮಾನಿಗಳು ಈ ವೇಳೆ ಬೃಹತ್ ಗಾತ್ರದ ಕ್ರೇನ್ ಬಳಸಿ ಹೂವಿನ ಹಾರ ಹಾಕಿ ಸಂಭ್ರಮಿಸಿದ್ದಾರೆ. ಬೃಹತ್ ಗಾತ್ರದ ಹಾರದ ನಡುವೆ ಹುಲಿ ಚಿತ್ರವನ್ನು ಹಾಕಿ ಅಧಿಕಾರಿಗಳನ್ನು ಹಾಡಿಹೊಗಳಿದ್ದಾರೆ. ದೇಶವೇ ಶೋಕದಲ್ಲಿರುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಇಂತಹ ಸಂಭ್ರಮದ ಅಗತ್ಯವೇನಿತ್ತು ಎಂಬ ಪ್ರಶ್ನೆ ನಗರವಾಸಿಗಳದ್ದಾಗಿದೆ.