ಪೊಲೀಸರು ಸಮರ್ಥವಾಗಿ ಕೆಲಸ ಮಾಡಿದ್ದಾರೆ: ನಾಗಲಕ್ಷ್ಮಿ

Nagalakshmi
Published on

ರಾಮನಗರ: ಬಿಡದಿ ಭದ್ರಾಪುರದ ಖುಷಿ ಸಾವಿನ ಪ್ರಕರಣದ ತನಿಖೆಯನ್ನು ನಮ್ಮ ಪೊಲೀಸರು ಉತ್ತಮವಾಗಿ ಮಾಡಿದ್ದು, ಸಂಶಯ ಪಡುವ ಅಗತ್ಯವೇ ಇಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಹೇಳಿದರು.

ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ಎಸ್‌ಪಿ ಶ್ರೀನಿವಾಸಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಖುಷಿ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಘಟನೆಗಳು ದೂರು ನೀಡಿವೆ. ಕೆಲವು ಪ್ರಶ್ನೆಗಳನ್ನು ಎತ್ತಿವೆ. ಈ ಸಂಬಂಧ ಎಸ್‌ಪಿ ಅವರೊಟ್ಟಿಗೆ ಸುದೀರ್ಘವಾಗಿ ಚರ್ಚೆ ಮಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಸಿಸಿಟಿವಿ ದೃಶ್ಯಾವಳಿ ಮತ್ತು ಎಫ್‌ಎಸ್‌ಎಲ್ ಹಾಗೂ ಮರಣೋತ್ತಮ ವರದಿ ಪರೀಕ್ಷೆಗಳು ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಹಾಗೂ ಕೊಲೆ ಆಗಿರುವುದನ್ನು ದೃಢಪಡಿಸಿಲ್ಲ.

ಪೊಲೀಸ್ ತನಿಖೆ ಬಗ್ಗೆ ಕೆಲವು ಸಾಮಾಜಿಕ ಕಾಯಕರ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಷ್ಟು ಬೇಗ ಎಫ್‌ಎಸ್ ಎಲ್ ವರದಿ ಸಿಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ. ಆದರೆ ಮಹಿಳೆ ಅಥವಾ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣದ ಸೂಕ್ಷ್ಮತೆಯನ್ನು ಅರಿತು ಆಧ್ಯತೆ ಮೇಲೆ ವರದಿ ನೀಡಲಾಗಿದೆ. ಮರಣೋತ್ತರ ಪರೀಕ್ಷೆಯ ಪ್ರತಿ ಕ್ಷಣವನ್ನು ವಿಡಿಯೋ ಮಾಡಿಸಲಾಗಿದೆ. ಇಲ್ಲಿ ಯಾವುದನ್ನೂ ಮುಚ್ಚಿ ಹಾಕಲು ಪ್ರಯತ್ನ ಮಾಡಲು ಸಾಧ್ಯವೇ ಇಲ್ಲ ಎಂದರು.

ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನ ಬಂದ ಎಲ್ಲರನ್ನೂ ವಿಚಾರಣೆಯನ್ನು ಪೊಲೀಸರು ಮಾಡಿದ್ದು, ರೈಲ್ವೆ ಟ್ರಾಕ್ ಸಮೀಪ ಕಾರೋಂದು ಬಂದ ಬಗ್ಗೆಯೂ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾರಿನ ಮಾಲೀಕರನ್ನು ಸಹ ಕರೆದು ವಿಚಾರಣೆ ನಡೆಸಿದ್ದಾರೆ. ಮೃತಪಟ್ಟ ಖುಷಿಯ ಅಕ್ಕನಿಗೆ ಸಹ ಮಾತು ಬರುವುದಿಲ್ಲ. ಅಕ್ಕಿ ತಂಗಿ ನಡುವೆ ಸಣ್ಣ ಜಗಳ ಆಗಿರುವುದನ್ನು ಆಕೆ ಹೇಳಿದ್ದಾಳೆ ಎಂದು ನಾಗಲಕ್ಷ್ಮಿ ತಿಳಿಸಿದರು.

ಜಿಲ್ಲೆಯಲ್ಲಿ ಮಹಿಳೆಯರ ರಕ್ಷಣೆ ಮತ್ತು ಇಂತಹ ಘಟನೆಗಳು ಮರುಕಳುಹಿಸದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ವರದಿಯನ್ನು ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಶ್ರೀನಿವಾಸಗೌಡ ಅವರಿಗೆ ಸೂಚನೆಯನ್ನು ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net