ಬಿತ್ತನೆ ಬೀಜ ವಿತರಣೆಗೆ ಪೊಲೀಸ್ ಕಾವಲು

shiggavi seeds galate
Published on

ಶಿಗ್ಗಾಂವಿ: ಕೃಷಿ ಇಲಾಖೆಯಲ್ಲಿ ಕೊಡುವ ರಿಯಾಯಿತಿ ದರದ ಬಿತ್ತನೆ ಬೀಜಕ್ಕಾಗಿ ನೂರಾರು ರೈತರು ಒಮ್ಮೆಲೇ ಆಗಮಿಸಿದ್ದರಿಂದ ನೂಕುನುಗ್ಗಲಾಗಿ ಪಟ್ಟಣದ ರೈತ ಸಂಪರ್ಕ ಕಚೇರಿಯನ್ನು ಬಂದ್ ಮಾಡಿದ ಘಟನೆ ಶುಕ್ರವಾರ ನಡೆಯಿತು.

ಬಿತ್ತನೆ ಬೀಜಗಳನ್ನು ಕೊಡುವ ಮಾಹಿತಿ ತಿಳಿದು ನೂರಾರು ರೈತರು, ಬೆಳಗ್ಗೆಯಿಂದಲೇ ರೈತ ಸಂಪರ್ಕ ಕಚೇರಿ ಮುಂದೆ ಜಮಾವಣೆಗೊಂಡು ಅಧಿಕಾರಿಗಳು ಕಚೇರಿಗೆ ಆಗಮಿಸುತ್ತಿದ್ದಂತೆ ನಾ ಮುಂದೆ, ತಾ ಮುಂದೆ ಎಂದು ನೂಕುನುಗ್ಗಲು ಉಂಟಾಗಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು.

ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು, ರೈತರನ್ನು ಸಮಾಧಾನಪಡಿಸಿ ಪೊಲೀಸ್ ಸರ್ಪಗಾವಲಿನೊಂದಿಗೆ ಬೀಜ ವಿತರಿಸಲು ಪ್ರಾರಂಭಿಸಿದರು.


ಬೀಜ ವಿತರಣೆಗೆ ಕ್ಯೂ ಆರ್ ಕೋಡ್ ವ್ಯವಸ್ಥೆ ಮಾಡಿದ್ದರಿಂದ ವಿತರಣೆ ಕಾರ್ಯದಲ್ಲಿ ಸ್ವಲ್ಪ ವಿಳಂಬವಾಯಿತು. ರೈತರು ಸಮಾಧಾನಗೊಳ್ಳದೆ ತರಾತುರಿಯಲ್ಲಿ ಬೀಜ ವಿತರಣೆಗೆ ಒತ್ತಾಯಿಸುತ್ತಿದಂತೆ ಮತ್ತೆ ಗೊಂದಲವುಂಟಾಗಿ ಬೀಜ ವಿತರಣೆ ಕಾರ್ಯವನ್ನು ಕೆಲ ಹೊತ್ತು ಸ್ಥಗಿತಗೊಳಿಸಲಾಯಿತು.


ಅಧಿಕಾರಿಗಳು ಮತ್ತು ಪೊಲೀಸರು ರೈತರನ್ನು ಮನವೊಲಿಸಿ ಸರದಿ ಸಾಲಿನಲ್ಲಿ ಬಂದು ಬೀಜ ಪಡೆಯಿರಿ ಎಂದು ಮನವಿ ಮಾಡಿದ ನಂತರ ಬೀಜ ವಿತರಣೆ ಕಾರ್ಯ ಪ್ರಾರಂಭಿಸಲಾಯಿತು.

ತಾಲೂಕಿನ ರೈತರಿಗೆ ವಿತರಿಸಲು ಸಾಕಷ್ಟು ಬಿತ್ತನೆ ಬೀಜಗಳು ದಾಸ್ತಾನಿದೆ. ರೈತರು ತಾಳ್ಮೆಯಿಂದಿದ್ದು ಬಿತ್ತನೆ ಬೀಜಗಳನ್ನು ಖರೀದಿಸಬೇಕು. ಹೊಸದಾಗಿ ಕ್ಯೂ ಆರ್ ಕೋಡ್ ವ್ಯವಸ್ಥೆ ಅಳವಡಿಸಿದ್ದರಿಂದ ವಿತರಣೆ ಕಾರ್ಯದಲ್ಲಿ ಸ್ವಲ್ಪ ವಿಳಂಬವಾಗವಾಗುತ್ತಿದೆ. - ಸುರೇಶಬಾಬು ದೀಕ್ಷಿತ್ ತಾಲೂಕು ಸಹಾಯಕ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net