

ಬೆಂಗಳೂರು: ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿ ವಯೋಮಿತಿಯಲ್ಲಿ ಎರಡು ವರ್ಷ ಏರಿಕೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಇದು 2022-23ನೇ ಸಾಲಿನ ನೇಮಕಾತಿಗೆ ಮಾತ್ರ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಿದೆ.
ಹೊಸ ಆದೇಶದ ಪ್ರಕಾರ ಸಾಮಾನ್ಯ ವರ್ಗದ ವಯೋಮಿತಿ 25 ರಿಂದ 27 ವರ್ಷಕ್ಕೆ, ಎಸ್ಸಿ/ಎಸ್ಟಿ ಮತ್ತು ಹಿಂದುಳಿದ ವರ್ಗಗಳಿಗೆ 27 ರಿಂದ 29ಕ್ಕೆ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30 ರಿಂದ 32 ವರ್ಷಕ್ಕೆ ಏರಿಕೆ ಆಗಲಿದೆ. ಸಿವಿಲ್ ಕಾನ್ಸ್ಟೆಬಲ್ ನೇಮಕಾತಿಯಲ್ಲಿ ಸೇವಾ ನಿರತ ಎಸ್ಸಿ ಮತ್ತು ಹಿಂದುಳಿದ ವರ್ಗದ ಸೇವಾ ನಿರತ ಅಭ್ಯರ್ಥಿಗಳಿಗೆ 35 ಮತ್ತು ಇತರ ಅಭ್ಯರ್ಥಿಗಳಿಗೆ 33ಕ್ಕೆ ಏರಿಕೆ ಮಾಡಲಾಗಿದೆ.
ಕರೊನಾ ಹಿನ್ನೆಲೆ ಕಳೆದ ಮೂರು ವರ್ಷಗಳಿಂದ ನಿಯಮಿತವಾಗಿ ನೇಮಕಾತಿ ನಡೆಯದ ಪ್ರಯುಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶದಿಂದ ವಂಚಿತರಾಗಿದ್ದರು. ಈ ಸಲುವಾಗಿ ವಯೋಮಿತಿಯನ್ನು 2 ವರ್ಷ ಏರಿಕೆ ಮಾಡಲಾಗಿದೆ. ಇದು ಒಂದು ಬಾರಿಗೆ ಅನ್ವಯ ಆಗುವಂತೆ 2022-23ನೇ ಸಾಲಿನಲ್ಲಿ ಕರೆದಿರುವ ಸಿಎಆರ್ ಮತ್ತು ಡಿಎಆರ್ ಕಾನ್ಸ್ಟೆಬಲ್ಗಳ (420+3064) 3,484 ಹುದ್ದೆಗಳಿಗೆ ಮತ್ತು ಸಿವಿಲ್ ಕಾನ್ಸ್ಟೆಬಲ್ 1,591 ಹುದ್ದೆಗಳ ನೇಮಕಾತಿಗೆ ವಯೋಮಿತಿ 2 ವರ್ಷ ಹೆಚ್ಚಳ ಅನ್ವಯ ಆಗಲಿದೆ. ಇವರಿಗೆ ಅನುಕೂಲ ಆಗುವಂತೆ ಅರ್ಜಿ ಸಲ್ಲಿಸುವ ನಿಗದಿತ ಕೊನೆಯ ದಿನಾಂಕವನ್ನು ಒಂದು ವಾರ ವಿಸ್ತರಿಸಲಾಗಿದೆ. ಈ ಪ್ರಕಾರ ಸಿವಿಲ್ ಕಾನ್ಸ್ಟೆಬಲ್ಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಅ.31ರಿಂದ ನ.30ರವರೆಗೆ ಮತ್ತು ಶುಲ್ಕ ಪಾವತಿಸುವ ಕೊನೆಯ ದಿನಾಂಕವನ್ನು ನ.3 ರಿಂದ ಡಿ.2 ವರೆಗೆ ವಿಸ್ತರಿಸಲಾಗಿದೆ.