ಮದ್ದೂರು: ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಚಿನ್ನಾಭರಣಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ತಾಲೂಕಿನ ಕೊಪ್ಪ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಡಗಣ್ಣಯ್ಯ ಬಂಧಿತ ಆರೋಪಿ.
ಶುಕ್ರವಾರ ರಾತ್ರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಪಟ್ಟಣದ ಪೊಲೀಸರು, ಜೆಎಂಎಫ್‌ಸಿ ನ್ಯಾಯಾಲಯದ 2ನೇ ಅಪರ ಸಿವಿಲ್ ನ್ಯಾಯಾಧೀಶ ಎನ್.ವಿ.ಕೋನಪ್ಪ ಅವರ ನಿವಾಸದಲ್ಲಿ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಪೇದೆ ಕೆಂಡಗಣ್ಣಯ್ಯ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎರಡು ತಿಂಗಳ ಹಿಂದಷ್ಟೇ ಕೊಪ್ಪ ಠಾಣೆಗೆ ವರ್ಗಾವಣೆಗೊಂಡಿದ್ದರು. ಶ್ರೀರಂಗಪಟ್ಟಣ ಠಾಣೆಯಲ್ಲಿದ್ದಾಗ ನಗುವನಹಳ್ಳಿಯಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಗಳೊಂದಿಗೆ ಶಾಮೀಲಾಗಿ, ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ 120 ಗ್ರಾಂ ಚಿನ್ನಾಭರಣದಲ್ಲಿ ಕತ್ತಿನ ಸರ ಹಾಗೂ ಬ್ರೇಸ್‌ಲೈಟ್ ಮಾಡಿಸಿಕೊಂಡಿದ್ದ. ಅಲ್ಲದೆ, ಉಳಿದ ಚಿನ್ನವನ್ನು ಮಾರಾಟ ಮಾಡಿದ್ದ.
ನಗುವನಹಳ್ಳಿ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳೇ ಪಟ್ಟಣದ ಕೆಂಗಲ್ ಹನುಮಂತಯ್ಯ ನಗರ ಬಡಾವಣೆಯ ಡಾ.ಚಂದ್ರು ಅವರ ಮನೆಯಲ್ಲಿ ಜ.18ರಂದು ಲಕ್ಷಾಂತರ ರೂ.ನಗದು, ಚಿನ್ನಾಭರಣ ದೋಚಿಸಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೆ ಸಿಪಿಐ ವೆಂಕಟೇಗೌಡ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ಕಾನ್‌ಸ್ಟೆಬಲ್ ಕೆಂಡಗಣ್ಣಯ್ಯ ಆರೋಪಿಯಿಂದ ವಶಪಡಿಸಿಕೊಂಡಿದ್ದ ಚಿನ್ನಾಭರಣಗಳ ಪೈಕಿ 3.50 ಲಕ್ಷ ರೂ.ಮೌಲ್ಯದ 120 ಗ್ರಾಂ ಚಿನ್ನವನ್ನು ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕೆಂಡಗಣ್ಣಯ್ಯನಿಂದ 61 ಗ್ರಾಂ ಚಿನ್ನವನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಆದೇಶ ಮೇರೆಗೆ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.