

ಬೆಂಗಳೂರು: ವ್ಯಕ್ತಿಯೊಬ್ಬ ಮದ್ಯಪಾನ ಮಾಡಿಕೊಂಡು ಅದೇ ಮತ್ತಿನಲ್ಲಿ ಆಡಿದ ಮಾತುಗಳೇ ಪ್ರಾಣಕ್ಕೆ ಕುತ್ತಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಪ್ರಕರಣದ ದಾಖಲಾದ ಆರೇ ಗಂಟೆಗಳಲ್ಲಿ ಕೊಲೆಗಡುಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಜೀವನ್ಬಿಮಾನಗರದಲ್ಲಿ ನಡೆದ ಆಟೋ ಚಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಕೊಲೆಯಾದ ಆಟೋ ಚಾಲಕ, ಮಧುಸೂದನ್ ಮತ್ತು ಯತೀಶ್ ಗೌಡ ಕೊಲೆ ಆರೋಪಿಗಳು. ಜೀವನ್ಬಿಮಾ ನಗರದಲ್ಲಿ ನಿನ್ನೆ ರಾತ್ರಿ ಬಾರ್ವೊಂದಕ್ಕೆ ತೆರಳಿ ಮದ್ಯಪಾನ ಮಾಡಿದ್ದ ಮಂಜುನಾಥ್, ಪಾನಮತ್ತನಾಗಿ ಹೊರಬಂದು ಹೊರಗಡೆ ಇದ್ದ ಆಟೋವೊಂದನ್ನು ಏರಿದ್ದ.
ಆಗ ಆಟೋದಲ್ಲಿದ್ದ ಮಧುಸೂದನ್ ಮತ್ತು ಯತೀಶ್ ಗೌಡ ಆತನನ್ನು ಆಟೋದಿಂದ ಇಳಿಯುವಂತೆ ಹೇಳಿದ್ದರು. ಆದರೆ ಅದಕ್ಕೆ ಈತ ಮದ್ಯದ ಅಮಲಿನಲ್ಲಿ ಕೆಟ್ಟದಾಗಿ ಬೈದಿದ್ದ. ಆಗ ಅವರಿಬ್ಬರು ಈತನಿಗೆ ಥಳಿಸಿದ್ದರು. ಆಗ ಬಾರ್ ಸಿಬ್ಬಂದಿ ಮತ್ತು ಸಾರ್ವಜನಿಕರು ಜಗಳ ಬಿಡಿಸಿ ಕಳಿಸಿದ್ದರು.
ಇದನ್ನೂ ಓದಿ: ಟೈಟಾಗಿ ಹೋಗಿ ಎಟಿಎಂ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದ!
ಆ ಬಳಿಕ ಬಾರ್ನಿಂದ ಸ್ವಲ್ಪ ದೂರ ಹೋಗಿ ಫುಟ್ಪಾತ್ ಮೇಲೆ ಮಂಜುನಾಥ್ ಕೂತಿದ್ದ. ನಂತರ ಮಧುಸೂದನ್ ಮತ್ತು ಯತೀಶ್ ಆಟೋದಲ್ಲಿ ಅಲ್ಲಿಗೆ ಬಂದಾಗ ಅಲ್ಲಿ ಮತ್ತೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಅವರು ಇಟ್ಟಿಗೆ ಹಾಗೂ ಕಬ್ಬಿಣದ ಪೈಪ್ನಿಂದ ಹೊಡೆದಿದ್ದು, ಮಂಜುನಾಥ್ ಸಾವಿಗೀಡಾಗಿದ್ದ. ಈ ಕುರಿತು ಜೀವನ್ಬಿಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಸ್ ದಾಖಲಾದ ಆರೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.