ಡ್ರಗ್​ ಪೆಡ್ಲಿಂಗ್ ಬಗ್ಗೆ ಪೊಲೀಸರಿಗೆ ತಿಳಿಸಿದವನ ಬಳಿಯೇ ಇತ್ತು ಗಾಂಜಾ ಮತ್ತು ಏರ್​ಗನ್​!

Feature
Published on

ಬೆಂಗಳೂರು: ವ್ಯಕ್ತಿಯೊಬ್ಬ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ಕೊಟ್ಟು, ಆತನನ್ನು ಬಂಧಿಸುವ ಸಂದರ್ಭದಲ್ಲೂ ಪೊಲೀಸರೊಂದಿಗೇ ಇದ್ದ ದೂರುದಾರನ ಬಳಿಯೇ ಗಾಂಜಾ ಹಾಗೂ ಏರ್​ಗನ್​ ಕಂಡುಬಂದಿದೆ. ಅಷ್ಟಕ್ಕೂ ಹೀಗೆ ಸಿಕ್ಕಿಬಿದ್ದ ಆರೋಪಿ ಮಾಜಿ ಸಚಿವರೊಬ್ಬರ ಮೊದಲ ಪತ್ನಿಯ ಸಹೋದರ ಎಂಬ ಮಾಹಿತಿಯೂ ಹರಿದಾಡುತ್ತಿದೆ.

ಭರತ್ ಎಂಬ ವ್ಯಕ್ತಿ ಡ್ರಗ್​ ಪೆಡ್ಲಿಂಗ್ ಮಾಡುತ್ತಿದ್ದಾನೆ ಎಂದು ರತನ್​ ಲಾಲ್​ ಎಂಬಾತ ಕುಮಾರಸ್ವಾಮಿ ಬಡಾವಣೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಸುಳಿವಿನ ಮೇರೆಗೆ ಧಾವಿಸಿದ್ದ ಪೊಲೀಸರು ಮಫ್ತಿಯಲ್ಲಿ ಬಂದು ಭರತ್​ನನ್ನು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ರತನ್​ ಲಾಲ್​ ಕೂಡ ಪೊಲೀಸರ ಜೊತೆಗಿದ್ದ.

ಮಫ್ತಿ ಪೊಲೀಸರ ಜತೆ ರತನ್​ ಲಾಲ್ ಇದ್ದಿದ್ದನ್ನು ನೋಡಿದ ಸ್ಥಳೀಯರು ರತನ್​ ಲಾಲ್​ ಅಪಹರಣ ಮಾಡುತ್ತಿದ್ದಾನೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು. ಆಗ ಸ್ಥಳಕ್ಕೆ ಬಂದ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಅಲ್ಲಿ ಕಾರ್ಯಾಚರಣೆ ಮಾಡಿದ್ದು, ಕುಮಾರಸ್ವಾಮಿ ಬಡಾವಣೆ ಪೊಲೀಸರು ಎಂಬುದು ಗೊತ್ತಾಗಿದೆ.

ಈ ಸಂದರ್ಭದಲ್ಲಿ ರತನ್​ ಲಾಲ್​ ಬ್ಯಾಗ್ ಪರಿಶೀಲನೆ ಮಾಡಿದಾಗ ಅದರಲ್ಲಿ ಏರ್​ಗನ್ ಹಾಗೂ ಗಾಂಜಾ ಇರುವುದು ಪತ್ತೆಯಾಗಿದೆ. ಆತನನ್ನು ವಶಕ್ಕೆ ಪಡೆದ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯಕ್ಕೆ ಪೊಲೀಸ್ ವಶದಲ್ಲಿರುವ ಆರೋಪಿ ರತನ್​ ಲಾಲ್​ ಮಾಜಿ ಸಚಿವ ಸಿ.ಪಿ. ಯೋಗೀಶ್ವರ್​ ಅವರ ಮೊದಲ ಪತ್ನಿಯ ಅಣ್ಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net