

ಉತ್ತರಕನ್ನಡ: ಹುಡುಗಿಯರನ್ನು ಚುಡಾಯಿಸಿದ್ದಷ್ಟೇ ಅಲ್ಲದೆ ಅದನ್ನು ಪ್ರಶ್ನಿಸಿದವರನ್ನು ಕೊಲೆ ಮಾಡಿ ಪರಾರಿಯಾದವನನ್ನು ಒಂದೇ ದಿನದೊಳಗೆ ಪತ್ತೆ ಮಾಡಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸಲೀನ್ ಕೋಟೆಬಾಗಿಲು ಎಂಬಾತ ಬಂಧಿತ ಆರೋಪಿ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಚಂದಾವರ ಎಂಬಲ್ಲಿ ನಿನ್ನೆ ಈ ಕೊಲೆ ನಡೆದಿತ್ತು. ಸಲೀನ್ ಹುಡುಗಿಯರನ್ನು ಚುಡಾಯಿಸಿದ್ದಕ್ಕೆ ಅಬು ತಲೀಬ್ ಶೇಖ್ ಎಂಬಾತ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದ ಸಿಟ್ಟಾದ ಸಲೀನ್, ಅಬುವನ್ನು ಕೊಲೆ ಮಾಡಿ ಪರಾರಿಯಾಗಿದ್ದ.
ಅಲ್ಲಿಂದ ಪರಾರಿಯಾದ ಸಲೀನ್, ಹತ್ತಿರದ ಬೆಟ್ಟವನ್ನು ಏರಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹೊನ್ನಾರ ಠಾಣೆ ಪೊಲೀಸರು ಆರೋಪಿಯ ಪತ್ತೆಗೆ ಬಲೆಬೀಸಿದ್ದರು. ಕುಮಟಾ ಪೊಲೀಸರೊಂದಿಗೆ ಕಾರ್ಯಾಚರಣೆಗಿಳಿದ ಹೊನ್ನಾವರ ಪೊಲೀಸರು ಬೆಟ್ಟವೇರಿ ಪರಾರಿಯಾಗಿದ್ದ ಸಲೀನ್ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.