

ಬೆಂಗಳೂರು: ಶ್ರೀಕಿ ಎಂದೇ ಕುಖ್ಯಾತನಾಗಿದ್ದ ಹ್ಯಾಕರ್ ಶ್ರೀಕೃಷ್ಣ ದೊಡ್ಡ ಪ್ರಕರಣವೊಂದರಲ್ಲಿ ಸಿಲುಕಿಕೊಂಡು ಜಾಮೀನಿನ ಮೇಲೆ ಹೊರಗೆ ಬಂದಿದ್ದರೂ ತಲೆಮರೆಸಿಕೊಂಡಿದ್ದ. ಆದರೆ ಇಂದು ನಗರದ ಸ್ಟಾರ್ ಹೋಟೆಲ್ವೊಂದರಲ್ಲಿ ಆತನ ಶ್ರೀಮಂತ ಗೆಳೆಯ, ಖ್ಯಾತ ಉದ್ಯಮಿಯೊಬ್ಬರ ಪುತ್ರನ ರಂಪಾಟದಿಂದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಶ್ರೀಕಿಯನ್ನು ಭೇಟಿಯಾಗಲು ನಗರದ ಖ್ಯಾತ ಉದ್ಯಮಿಯೊಬ್ಬರ ಪುತ್ರ ತೆರಳಿದ್ದ. ಆತ ಮದ್ಯಪಾನ ಮಾಡಿಕೊಂಡಿದ್ದು, ಭದ್ರತಾ ಸಿಬ್ಬಂದಿ ಪ್ರಶ್ನಿಸಿದಾಗ ಸರಿಯಾದ ವಿವರಣೆ ನೀಡದೆ ಒಳಗೆ ನುಗ್ಗಲು ಯತ್ನಿಸಿದ್ದ. ಇದರಿಂದಾಗಿ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಸ್ಥಳಕ್ಕೆ ತೆರಳಿದ್ದ ಜೀವನ್ಬಿಮಾನಗರ ಪೊಲೀಸರು ಶ್ರೀಕಿ ಹಾಗೂ ಆತನ ಸ್ನೇಹಿತ ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಹ್ಯಾಕರ್ ಶ್ರೀಕಿ 2 ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಆತ ಸದ್ಯ ಎಲ್ಲಿದ್ದಾನೆ ಎಂಬ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಇದೀಗ ಈ ಕೇಸ್‌ನಿಂದ ಆತ ಐಷಾರಾಮಿ ಹೋಟೆಲ್‌ನಲ್ಲಿ ತಂಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಇಬ್ಬರನ್ನೂ ಮಾದಕದ್ರವ್ಯ ಸೇವನೆ ಕುರಿತಾಗಿಯೂ ಪರೀಕ್ಷೆಗೆ ಒಳಪಡಿಸಿದ್ದು, ಆ ಸಂಬಂಧಿತ ವರದಿ ಇನ್ನಷ್ಟೇ ಬರಬೇಕಿದೆ. ಸದ್ಯಕ್ಕೆ ಉದ್ಯಮಿ ಪುತ್ರ ಮದ್ಯಪಾನ ಮಾಡಿದ್ದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇಬ್ಬರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.