

ಬೆಂಗಳೂರು: ಕುಖ್ಯಾತ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಹಾಗೂ ಆತನ ಸ್ನೇಹಿತ-ಖ್ಯಾತ ಉದ್ಯಮಿಯೊಬ್ಬರ ಪುತ್ರನನ್ನು ಹಲ್ಲೆ ಪ್ರಕರಣದಲ್ಲಿ ಜೀವನ್ಬಿಮಾನಗರ ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.
ಶ್ರೀಕಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ರಾಯಲ್ ಆರ್ಕಿಡ್ 5 ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದ. ಶನಿವಾರ ಮಧ್ಯಾಹ್ನ ಖ್ಯಾತ ಉದ್ಯಮಿಯೊಬ್ಬರ ಪುತ್ರ ಮದ್ಯಪಾನ ಮಾಡಿ ಸ್ನೇಹಿತ ಶ್ರೀಕಿ ಇದ್ದ ರೂಮ್ಗೆ ಹೋಗಲು ಮುಂದಾಗಿದ್ದ.
ಹೋಟೆಲ್ ಎಂಟ್ರಿ ಆಗುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಉದ್ಯಮಿಯ ಪುತ್ರನನ್ನು ತಡೆದು ವಿಚಾರಿಸಿದ್ದರು. ಕುಡಿದ ಮತ್ತಿನಲ್ಲಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿ ಒಳಗೆ ಹೋಗದಂತೆ ಆತನನ್ನು ತಡೆದಿದ್ದರು. ಇದರಿಂದ ಸಿಟ್ಟಾದ ಆತ ಹೋಟೆಲ್ ಸಿಬ್ಬಂದಿ ಮೇಲೆ ರೇಗಾಡಿ, ನನ್ನನ್ನೇ ಪ್ರಶ್ನೆ ಮಾಡುತ್ತೀರಾ? ಎಂದು ಬೆದರಿಸಿದ್ದ. ಇದರಿಂದ ಆತಂಕಗೊಂಡ ಹೋಟೆಲ್ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೆಬಿ ನಗರ ಪೊಲೀಸರು ರಾಯಲ್ ಆರ್ಕಿಡ್ ಹೋಟೆಲ್‌ಗೆ ಬಂದು ಉದ್ಯಮಿಯ ಪುತ್ರ ಹಾಗೂ ಶ್ರೀಕಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಶ್ರೀಕಿಗೆ ಮತ್ತೆ ಸಂಕಷ್ಟ?: ಹೋಟೆಲ್‌ನವರು ಯಾರ ವಿರುದ್ಧ ದೂರು ಕೊಡುತ್ತಾರೋ ಅದರ ಆಧಾರದ ಮೇಲೆ ಮುಂದಿನ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಎಸ್.ಡಿ ಶರಣಪ್ಪ ತಿಳಿಸಿದ್ದಾರೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಹ್ಯಾಕರ್ ಶ್ರೀಕಿ 2 ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಆತ ಸದ್ಯ ಎಲ್ಲಿದ್ದಾನೆ ಎಂಬ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಇದೀಗ ಈ ಕೇಸ್‌ನಿಂದ ಆತ ಐಷಾರಾಮಿ ಹೋಟೆಲ್‌ನಲ್ಲಿ ತಂಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಆದರೆ, ಇಷ್ಟೊಂದು ಹಣ ಶ್ರೀಕಿಗೆ ಎಲ್ಲಿಂದ ಬಂತು ? ಶ್ರೀಮಂತ ಉದ್ಯಮಿಗಳು ನೆರವು ನೀಡುತ್ತಿದ್ದಾರೆಯೇ? ಶ್ರೀಕಿ ಹಿಂದೆ ಯಾರಿದ್ದಾರೆ? ಎಂಬ ಹಲವು ವಿಚಾರಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಪ್ರಕರಣದಿಂದ ಶ್ರೀಕಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಅಂತಾರಾಷ್ಟ್ರೀಯ ವೆಬ್ಸೈಟ್, ಪೋಕರ್ ಗೇಮ್, ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ವೈಎಫ್‌ಐ ಖಾತೆ ಸೇರಿ ಹಲವಾರು ವೆಬ್ಸೈಟ್ ಹ್ಯಾಕ್ ಮಾಡಿದ ಆರೋಪದಲ್ಲಿ ಸಿಸಿಬಿ ಪೊಲೀಸರು ಶ್ರೀಕಿಯನ್ನು ಈ ಹಿಂದೆ ಬಂಧಿಸಿದ್ದರು. ಆತನ ಬಳಿ ಇದ್ದ 9 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಜಪ್ತಿ ಮಾಡಿದ್ದರು.