ಪ್ರೇಮಿಯೇ ಪ್ರೇಯಸಿಯ ರುಂಡ ಕಡಿದ ಪ್ರಕರಣ; ಕೊಲೆಗೆ ಸಹಕರಿಸಿದ್ದ ತಂದೆ, ಮದ್ವೆ ಮಾಡಿಸಿದ್ದ ತಾಯಿಯ ಬಂಧನ..

Arrest
Published on

ವಿಜಯನಗರ: ಪ್ರೇಮಿಯೇ ಪ್ರೇಯಸಿಯ ರುಂಡ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರ ಬಂಧನವಾಗಿದ್ದು, ಒಟ್ಟು ಬಂಧಿತರ ಸಂಖ್ಯೆ ಮೂರಕ್ಕೇರಿದೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಇದೀಗ ಪೊಲೀಸರು ಆರೋಪಿಯ ತಂದೆ-ತಾಯಿಯನ್ನೂ ಬಂಧಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ಜುಲೈ 21ರಂದು ಈ ಕೊಲೆ ನಡೆದಿತ್ತು. ಭೋಜರಾಜ್ ಎಂಬಾತ ತಾನು ಪ್ರೀತಿಸುತ್ತಿದ್ದ ನಿರ್ಮಲಾ (23) ಎಂಬಾಕೆಯನ್ನು ಮದುವೆಯಾಗಲು ಆಗಲಿಲ್ಲ ಎಂಬ ಹತಾಶೆಯಿಂದ ಅವಳ ಕೊಲೆ ಮಾಡಿ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದ. ಪೊಲೀಸರು ಅಂದು ಆರೋಪಿಯನ್ನು ಬಂಧಿಸಿದ್ದು, ಈಗ ಆತನ ತಂದೆ-ತಾಯಿಯನ್ನೂ ಬಂಧಿಸಿದ್ದಾರೆ.

ಆರೋಪಿ ಭೋಜರಾಜನ ತಂದೆ ಬಸಣ್ಣ ಮತ್ತು ತಾಯಿ ಕರಿಬಸಮ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಬಸಣ್ಣನನ್ನು ಕೊಲೆಗೆ ಸಹಕರಿಸಿದ್ದ ಆರೋಪದ ಮೇಲೆ ಹಾಗೂ ಕರಿಬಸಮ್ಮನನ್ನು ಮಗನಿಗೆ ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆಗೆ ಮದುವೆ ಮಾಡಿಸಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಇಬ್ಬರ ವಿರುದ್ಧ ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಮಲಾ ಜತೆ ಮದುವೆಯಾಗಲು ಅವಳ ಮನೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಭೋಜರಾಜ ಎರಡು ತಿಂಗಳ ಹಿಂದೆ ಬೇರೊಬ್ಬಳನ್ನು ಮದುವೆಯಾಗಿದ್ದ. ಆದರೆ ನಿರ್ಮಲಾ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಈತ, ಬೇರೊಂದು ಊರಿನಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ, ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದಾಗ ಈಕೆಯ ಕೊಲೆ ಮಾಡಿ ರುಂಡ ಖಾನಾಹೊಸಹಳ್ಳಿ ಪೊಲೀಸ್​ ಠಾಣೆಗೆ ಹಿಡಿದುಕೊಂಡು ಬಂದಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net