ಪ್ರೇಯಸಿಯ ತಲೆ ಕಡಿದು ಠಾಣೆಗೆ ತಂದ ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ದುರಂತ, ಪ್ರೇಯಸಿ ಕೊಂದು ಪ್ರಿಯಕರ ಆತ್ಮಹತ್ಯೆ!

New Project(59)
Published on

ಬೆಳಗಾವಿ: ತನ್ನನ್ನು ಮದುವೆಯಾಗಲಿಲ್ಲ ಎಂದು ಸಿಟ್ಟಿಗೆದ್ದ ಪ್ರಿಯಕರ, ಯುವತಿಯ ತಲೆ ಕಡಿದು ಅದನ್ನು ಹಿಡಿದುಕೊಂಡೇ ಪೊಲೀಸ್​ ಠಾಣೆಗೆ ಬಂದ ಭೀಕರ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ಶುಕ್ರವಾರ ನಡೆದಿತ್ತು. ಈ ಭಯಾನಕ ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಇಂತಹದ್ದೇ ಭೀಕರ ದುರಂತ ಬೆಳಗಾವಿಯಲ್ಲೂ ಸಂಭವಿಸಿದೆ. ಪ್ರೇಯಸಿಯನ್ನು ಕೊಂದವ, ಆಕೆಯ ಮೃತದೇಹದ ಮುಂದೆಯೇ ನೇಣಿಗೆ ಕೊರಳೊಡ್ಡಿದ್ದಾನೆ.

ಯರಗಟ್ಟಿ ತಾಲೂಕಿನ ಮದ್ದೂರು ಗ್ರಾಮದ ರೇಣುಕಾ ಕೆಂಚಪ್ಪ ಪಂಚಣ್ಣವರ(28) ಕೊಲೆಯಾದವಳು. ಸವದತ್ತಿ ತಾಲೂಕಿನ ರಾಮಚಂದ್ರ ತೆಣಗಿ(26) ಆತ್ಮಹತ್ಯೆಗೆ ಶರಣಾದವ. ರೇಣುಕಾ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ರಾಣಿ‌ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಮಚಂದ್ರ ಎಂಎ ವಿದ್ಯಾಭ್ಯಾಸ ಮಾಡುತ್ತಿದ್ದ. ನಗರದಲ್ಲೇ ರೂಂ ಒಂದರಲ್ಲಿ ಬಾಡಿಗೆಗೆ ನೆಲೆಸಿದ್ದಳು.

ಇವರಿಬ್ಬರೂ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚಿಗೆ ಯಾವುದೋ ವಿಚಾರಕ್ಕೆ ಬೇಸತ್ತ ರೇಣುಕಾ, ರಾಮಚಂದ್ರನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಳಂತೆ. ಬೇಸತ್ತ ರಾಮಚಂದ್ರ, ಗುರುವಾರ ರಾತ್ರಿ, ಆಕೆಯ ರೂಂಗೆ ಹೋಗಿ ಮಾತುಕತೆ ನಡೆಸಿದ್ದ. ಇದೊಂದು ಕೆಟ್ಟ ಕನಸು ಎಂದು ನನ್ನನ್ನು ಮರೆತು ಬಿಡು ಎಂದು ಆಕೆ ಹೇಳಿದ್ದಳಂತೆ. ಈ ಮಾತು ಕೇಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ರಾಮಚಂದ್ರ, ತಡರಾತ್ರಿ ಉಸಿರುಗಟ್ಟಿಸಿ ಪ್ರೇಯಸಿಯನ್ನು ಕೊಂದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಎಪಿಎಂಸಿ ಪೊಲೀಸರು ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ‌.

ವಿಜಯನಗರದಲ್ಲಿ ಭಯಾನಕ ಘಟನೆ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ಪಾಗಲ್ ಪ್ರೇಮಿ ಭೋಜರಾಜ, ಗುರುವಾರ ಸಂಜೆ ನಿರ್ಮಲಾ (23) ಎಂಬಾಕೆಯ ತಲೆ ಕಡಿದು ಪೊಲೀಸ್​ ಠಾಣೆಗೆ ಅದನ್ನು ತಂದು ಶರಣಾಗಿದ್ದಾನೆ. ಭೋಜರಾಜ ನಿರ್ಮಲಾಳನ್ನು ಪ್ರೀತಿಸುತ್ತಿದ್ದ. ನಿರ್ಮಲಾ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು. ನಿರ್ಮಲಾಳನ್ನು ಮದುವೆ ಮಾಡಿಕೊಂಡುವಂತೆ ಈ ಮೊದಲು ಆಕೆಯ ಪಾಲಕರಲ್ಲಿ ಈತ ಕೇಳಿದ್ದ. ಆದರೆ ಆಕೆಯ ಮನೆಯವರು ಒಪ್ಪಿರಲಿಲ್ಲ. ಇಷ್ಟಲ್ಲಾ ಆದ ಬಳಿಕ ಈತ ಬೇರೊಬ್ಬಳನ್ನು ಎರಡು ತಿಂಗಳ ಹಿಂದೆ ಮದುವೆಯಾಗಿದ್ದ. ಆದರೂ ನಿರ್ಮಲಾಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಬೇರೊಂದು ಊರಿನಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ, ಪರೀಕ್ಷೆಗಾಗಿ ಓಡಿಕೊಳ್ಳಲು ಊರಿಗೆ ಬಂದಿದ್ದಳು. ಆಗ ಮಚ್ಚಿನಿಂದ ಆಕೆಯ ತಲೆ ಕಡಿದು ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಠಾಣೆಗೆ ರುಂಡದೊಂದಿಗೆ ಬಂದಿದ್ದ. ಈ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net