

ಬೆಂಗಳೂರು: ಡ್ಯಾನ್ಸ್ ಬಾರ್ ಪರವಾನಗಿ, ಪೊಲೀಸರಿಂದ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ನಂಬಿಸಿ 1.20 ಕೋಟಿ ರೂ. ಪಡೆದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತನನ್ನು ಸಿಸಿಬಿ ಬಂಧಿಸಿದೆ. ಶಿವಮೊಗ್ಗ ಮೂಲದ ಭವಾನಿ ರಾವ್ ಮೋರೆ ಬಂಧಿತ. ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ಮೇರೆಗೆ ಸಿಸಿಬಿ ಅಧಿಕಾರಿಗಳು, ಶಿವಮೊಗ್ಗದಲ್ಲಿ ಆರೋಪಿಯನ್ನು ಬಂಧಿಸಿ ಕಬ್ಬನ್ ಪಾರ್ಕ್ ಠಾಣೆಗೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶಿವಮೊಗ್ಗದ ಬಿಜೆಪಿ ಯುವ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಭವಾನಿ ರಾವ್ ಮೋರೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಂಬಾ ಪರಿಚಯ ಇದ್ದಾರೆ. ಅವರ ಕಡೆಯಿಂದ ಡ್ಯಾನ್ಸ್ ಬಾರ್ ಪರವಾನಗಿ ಕೊಡಿಸುತ್ತೇನೆ. ಅಲ್ಲದೆ, ಸ್ಥಳೀಯ ಪೊಲೀಸರಿಂದ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ರಾತ್ರಿ ಸಮಯದಲ್ಲಿ ಎಷ್ಟು ಹೊತ್ತಾದರೂ ವ್ಯಾಪಾರ ಮಾಡಿಕೊಳ್ಳಿ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ನಂಬಿಸಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರಿಂದ 1.20 ಕೋಟಿ ರೂ. ವಸೂಲಿ ಮಾಡಿದ್ದ.
ಈ ಕುರಿತು ಬಾರ್ ಆ್ಯಂಡ್ ರೆಸ್ಟೋರೆಂಟ್ ಸಂಘದ ಪದಾಧಿಕಾರಿಗಳು ಗೃಹ ಸಚಿವರ ಗಮನಕ್ಕೆ ತಂದಿದ್ದರು. ಎಚ್ಚೆತ್ತ ಗೃಹ ಸಚಿವರು, ಆರೋಪಿಯನ್ನು ಬಂಧಿಸಿ ತನಿಖೆ ನಡೆಸುವಂತೆ ಸಿಸಿಬಿ ಪೊಲೀಸರಿಗೆ ಸೂಚನೆ ಕೊಟ್ಟಿದ್ದರು. ಇದರ ಅನ್ವಯ ಸಿಸಿಬಿ ಪೊಲೀಸರು, ಆರೋಪಿಗಳ ವಿವರ ಸಂಗ್ರಹಿಸಿದಾಗ ಶಿವಮೊಗ್ಗದಲ್ಲಿ ಇರುವುದು ಖಚಿತವಾಗಿದೆ. ಶಿವಮೊಗ್ಗಕ್ಕೆ ತೆರಳಿದ ವಿಶೇಷ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ಕಬ್ಬನ್ ಪಾರ್ಕ್ ಠಾಣೆಗೆ ಒಪ್ಪಿಸಿದ್ದಾರೆ.
ಸುರೇಶ್ ಕೊಟ್ಟ ದೂರಿನ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಆರೋಪಿ ಭವಾನಿ ರಾವ್ ಮೊರೆ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ರಾಜರಾಜೇಶ್ವರಿನಗರ ವಿಧಾನ ಸಭೆಗೆ ನಡೆದ ಉಪ ಚುನಾವಣೆಯಲ್ಲಿ ಭವಾನಿ ರಾವ್ ಮೋರೆ, ಬಿಜೆಪಿಯಿಂದ ಜವಾಬ್ದಾರಿ ಹೊಂದಿದ್ದರು ಎಂದು ತಿಳಿದುಬಂದಿದೆ.