

ವಿಜಯವಾಣಿ ಸುದ್ದಿಜಾಲ ಗುತ್ತಲ
ಗೂಡು ಕಟ್ಟುವ ಹಂತಕ್ಕೆ ಬಂದಿದ್ದ ರೇಷ್ಮೆ ಹುಳುಗಳಿಗೆ ದುಷ್ಕರ್ವಿುಗಳು ವಿಷ ಸಿಂಪಡಿಸಿರುವ ಘಟನೆ ಪಟ್ಟಣದ ಹೊರವಲಯದ ಶಿವನಗರ ತಾಂಡಾದ ಬಳಿಯ ರೇಷ್ಮೆ ಸಾಕಾಣಿಕೆ ಘಟಕದಲ್ಲಿ ಸೋಮವಾರ ತಡರಾತ್ರಿ ಜರುಗಿದೆ.
ಪಟ್ಟಣದ ಸಿದ್ದಪ್ಪ ನೀಲಪ್ಪ ಗೊರವರ ಎಂಬುವರಿಗೆ ಸೇರಿದ ರೇಷ್ಮೆ ಸಾಕಾಣಿಕೆ ಘಟಕಕ್ಕೆ ಸೋಮವಾರ ತಡರಾತ್ರಿ ಆಗಮಿಸಿದ ದುಷ್ಕರ್ವಿುಗಳು, ಘಟಕದ ಕಿಟಿಕಿಯ ಮೂಲಕ ಕ್ರಿಮಿನಾಶಕವನ್ನು ಹುಳುಗಳಿಗೆ ಸಿಂಪಡಿಸಿದ್ದಾರೆ. ಇದರಿಂದ ಗೂಡು ಕಟ್ಟುವ ಹಂತಕ್ಕೆ ಬಂದಿದ್ದ ಅಪಾರ ಪ್ರಮಾಣದ ರೇಷ್ಮೆ ಹುಳುಗಳು ಸಾವನ್ನಪ್ಪಿವೆ.
ಎಂದಿನಂತೆ ಬೆಳಗ್ಗೆ ಆಗಮಿಸಿದ ರೈತ ಸಿದ್ದಪ್ಪ ನೀಲಪ್ಪ ಗೊರವರ, ಕ್ರಿಮಿನಾಶಕದ ವಾಸನೆ ಗ್ರಹಿಸಿ ಕಿಟಕಿಯ ಬಳಿ ಪರಿಶೀಲಿಸಿದಾಗ ಹುಳುಗಳು ಸಾವನ್ನಪ್ಪಿದ್ದ ಕಂಡುಬಂದಿದೆ. ಕೂಡಲೆ, ತಮ್ಮ ಸಹೋದರರಿಗೆ ವಿಷಯ ತಿಳಿಸಿ ಸಿಂಪರಿಸಿದ ಕ್ರಿಮಿನಾಶಕ ಸ್ವಚ್ಛಗೊಳಿಸಿ, ಹೆಚ್ಚಿನ ಹಾನಿಯಾಗು ವುದನ್ನು ತಪ್ಪಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಎಪಿಎಂಸಿ ಅಧ್ಯಕ್ಷ ರಮೇಶ ಚಾವಡಿ, ಸಾಕಾಣಿಕೆ ಕೇಂದ್ರ ಪರಿಶೀಲಿಸಿ ರೈತರಿಗೆ ಸಾಂತ್ವನ ಹೇಳಿದರು. ಅಲ್ಲದೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಘಟನೆಯಿಂದಾದ ಹಾನಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ರೇಷ್ಮೆ ಬೆಳೆಗಾರ ದೇವಪ್ಪ ನೀಲಪ್ಪ ಗೊರವರ, ಈ ರೀತಿ ಕೃತ್ಯ ನನ್ನ ಮಾಲೀಕತ್ವದ ಸಾಕಾಣಿಕೆ ಘಟಕದ ಮೇಲೂ ಆಗಿತ್ತು. 10ಕ್ಕೂ ಅಧಿಕ ರೈತರ ಘಟಕಗಳಲ್ಲಿ ಇಂತಹ ಕೃತ್ಯ ನಡೆದಿದ್ದರೂ, ನಮಗೆ ಗೊತ್ತಾಗಿರಲಿಲ್ಲ. ಈ ಘಟನೆಯಿಂದಾಗಿ ಭಯವಾಗುತ್ತಿದೆ. ಇದೇ ರೀತಿ ಮುಂದುವರಿದರೆ ನಮ್ಮ ಗತಿ ಏನು ಎಂದು ತಿಳಿಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ರೇಷ್ಮೆ ಬೆಳೆಗಾರರನ್ನೇ ಗುರಿಯಾಗಿಸಿ ಇಂತಹ ದುಷ್ಕೃತ್ಯ ಎಸಗುತ್ತಿರುವವರನ್ನು ಪತ್ತೆ ಮಾಡಿ, ಅವರಿಗೆ ಶಿಕ್ಷೆಗೆ ಒಳಪಡಿಸಬೇಕು ಎಂದು ರೈತ ಸಂಘದ ಮುಖಂಡ ನಾಗಪ್ಪ ಗೊರವರ ಹಾಗೂ ರೇಷ್ಮೆ ಬೆಳೆಗಾರರು ಆಗ್ರಹಿಸಿದರು. ಅನೇಕ ರೇಷ್ಮೆ ಬೆಳೆಗಾರರು ಘಟನಾ ಸ್ಥಳಕ್ಕೆ ಆಗಮಿಸಿ ಘಟನೆ ವಿವರ ಪಡೆದುಕೊಂಡು, ಮುನ್ನೆಚ್ಚರಿಕೆ ಕ್ರಮಗಳ ಕುರಿತು ರ್ಚಚಿಸಿದರು.