

ಬೆಂಗಳೂರು: ಕಥೆ ಕಾದಂಬರಿ ಪುರಾಣಗಳಲ್ಲದ ವಚನಗಳು ಅನುಭಾವದ ಸೂಳ್ನೂಡಿಗಳಾಗಿದ್ದು, ವಚನಗಳಲ್ಲಿ ಸತ್ಯದ ಅನಾವರಣವಾಗಿದೆ ಎಂದು ಕವಯತ್ರಿ ಹಾಜ್ಹೀರಾ ಖಾನಂ ಹೇಳಿದಾರೆ.
ಕಲ್ಯಾಣ ಬಡಾವಣೆಯಲ್ಲಿ ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರ ನೇತೃತ್ವದಲ್ಲಿ ನೂರಾರು ವಚನಕಾರರು ಅನುಭವ ಮಂಟಪದಲ್ಲಿ ನಡೆಸಿದ ಸತ್ಸಂಗ ಇಂದಿಗೂ ವಿಶ್ವದ ಮೊದಲ ಪಾರ್ಲಿಮೆಂಟ್ ಎಂಬ ಬಣ್ಣನೆಗೆ ಪಾತ್ರವಾಗಿದೆ. ಅತ್ಯಂತ ಸರಳವಾದ ತಿಳಿಗನ್ನಡದಲ್ಲಿ ನೀಡಿರುವ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವರ್ಗ,ವರ್ಣ ಬೇಧವಿಲ್ಲದೆ ಸತ್ಯ ಶುದ್ದ ಕಾಯಕವನ್ನು ಅಳವಡಿಸಿಕೊಂಡು ಭಾವಪೂರ್ಣ ದಾಸೋಹವನ್ನು ನಡೆಸಿ ಮಾದರಿಯಾದ ವಿಚಾರಶೀಲ ದಸರಾ ನಾಡಿನೆಲ್ಲೆಡೆ ನಡೆಯಲಿ ಎಂದು ಖಾನಂ ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ಕಾಯಕಶೀಲರಾಗಿ ದಾಸೋಹಪ್ರೇಮಿಗಳಾಗಿ ಬದುಕನ್ನು ನಡೆಸಿ ಅಮೃತಸದೃಶವಾದ ವಚನಗಳನ್ನು ನೀಡಿರುವ ವಚನಕಾರ್ತಿಯರನ್ನು ನೆನೆದು, ವಚನಗಳನ್ನು ಹಾಡಿ ಅರ್ಥೈಸುವ ವಚನ ದಸರಾ 10 ದಿನಗಳವರೆಗೆ ನಡೆಯಲಿದೆ. ವಿಜಯದಶಮಿಯಂದು ಬಸವಣ್ಣನವರ ಮೆರವಣಿಗೆಯೊಂದಿಗೆ ಮುಕ್ತಾಯಗೊಳ್ಳಲಿದೆ. ನಂತರ ನ.18 ರಿಂದ 27 ರವರೆಗೆ ಕಲಾಗ್ರಾಮದಲ್ಲಿ ಮಕ್ಕಳ ವಚನ ಮೇಳವನ್ನು ಆಯೋಜಿಸಲಾಗಿದ್ದು ನೂರಾರು ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ಪಿಎಚ್‌ಡಿ ಪುರಸ್ಕೃತರಾದ ಡಾ.ಅನಿತಾ ಪ್ರಸಾದ್ ದಂಪತಿಗಳನ್ನು ವಚನಜ್ಯೋತಿ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಯಶವಂತಪುರ ಕ್ಷೇತ್ರದ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಿ.ಎಂ. ಪಂಚಾಕ್ಷರಿ, ವಚನಜ್ಯೋತಿ ಬಳಗದ ಪ್ರಭು ಇಸುವನಹಳ್ಳಿ, ರಾಜಾಗುರುಪ್ರಸಾದ್, ಪದ್ಮಜ ಪ್ರಸನ್ನ, ಮೀನಾಕ್ಷಿ ಮೇಟಿ, ಜಾನಕಿ, ಮಧು, ಕಾತ್ಯಾಯಿನಿ, ರೂಪಾ ಮತ್ತಿತರರಿದ್ದರು.