ಮೃತ ವಿದ್ಯಾರ್ಥಿ ನವೀನ್​ ಪಾಲಕರನ್ನು ಭೇಟಿಯಾದ ಪ್ರಧಾನಿ ಮೋದಿ ಅವರಿಂದ ಸಾಂತ್ವನ: ದೇಹದಾನಕ್ಕೆ ಮೆಚ್ಚುಗೆ

naveenparents
Published on

ಬೆಂಗಳೂರು: ರಷ್ಯಾ-ಯೂಕ್ರೇನ್​ ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದ ವಿದ್ಯಾರ್ಥಿ ನವೀನ್​ ಪಾಲಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿ, ಸಾಂತ್ವನ ಹೇಳಿದ್ದಾರೆ.

ಅಂದೇ ಬರುವ ಬಗ್ಗೆ ಯೋಚಿಸಲಾಗಿತ್ತು, ಆದರೆ ಹಲವು ಕಾರಣಗಳಿಂದ ನಿಮ್ಮನ್ನು ಭೇಟಿ ಸಾಧ್ಯವಾಗಲಿಲ್ಲ ಎಂದೂ ಕೂಡ ಪ್ರಧಾನಿ ಹೇಳಿದ್ದು, ನಾಲ್ಕೈದು ನಿಮಿಷಗಳ ಕಾಲ ನವೀನ್​ ತಂದೆ-ತಾಯಿ ಹಾಗೂ ಸಹೋದರ ಹರ್ಷ ಅವರೊಂದಿಗೆ ಮಾತನಾಡಿದರು.

ನಾಲ್ಕೈದು ನಿಮಿಷಗಳ ಕಾಲ ಪ್ರಧಾನಿಯವರು ನಮ್ಮ ಜೊತೆ ಮಾತನಾಡಿದರು, ನಮ್ಮ ಕಣ್ಣೀರು ನೋಡಿ ಅವರೂ ಕೂಡ ಭಾವುಕರಾದರು ಎಂದು ಮೃತ ನವೀನ್​ ತಂದೆ ಶೇಖರಗೌಡ ಮಾಧ್ಯಮದೊಂದಿಗೆ ಹೇಳಿದ್ದಾರೆ.

ಈ ವೇಳೆ ಮಗನ ಸಾವಿನ ದುಃಖದಲ್ಲೂ ಮಗನ ದೇಹದಾನ ಮಾಡಿದ್ದಕ್ಕೆ ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು, ನವೀನ್​ ಮೃತಪಟ್ಟ ನಂತರ ನಿಮ್ಮ ಭೇಟಿಗೆ ಬರಬೇಕಾಗಿತ್ತು, ಆದರೆ ಈಗ ಕಾಲ ಕೂಡಿದೆ ಬಂದಿದೆ. ನವೀನ್​​ ಸಹೋದರ ಹರ್ಷನನ್ನು ನೋಡಿದರೆ ಹರ್ಷ ಕೂಡ ಪ್ರತಿಭಾವಂತ ಇದ್ದಾನೆ ಎಂದು ಹೇಳಿದರು ಎಂದು ಶೇಖರ್​ಗೌಡ ತಿಳಿಸಿದರು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್​​​, ವೈದ್ಯನಾಗುವ ಕನಸು ಕಂಡ ಯೂಕ್ರೇನ್​​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ರಷ್ಯಾ-ಯೂಕ್ರೇನ್​ ಯುದ್ಧದ ಸಂದರ್ಭದಲ್ಲಿ ಬಾಂಬ್​ ದಾಳಿಯಲ್ಲಿ ಮೃತಪಟ್ಟಿದ್ದರು.

ಬೆಂಗಳೂರಿನ ಕುಮ್ಮಘಟ್ಟದ ಕಾರ್ಯಕ್ರಮದ ಬಳಿಕ ನವೀನ್ ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮೀ ಮತ್ತು ಸಹೋದರ ಹರ್ಷ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕೆಲಕಾಲ ಭೇಟಿ ಮಾಡಿ ಮಾತುಕತೆ ನಡೆಸಿದರು.

ಇದೇ ವೇಳೆ ಯೂಕ್ರೇನ್​ನಿಂದ ಬಂದ ಎಂಬಿಬಿಎಸ್​ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಂಡೆವು ಅದನ್ನು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಮಗೆ ಧೈರ್ಯವಾಗಿ ಇರುವಂತೆ ಧೈರ್ಯ ತುಂಬಿದರು ಎಂದು ಶೇಖರ್​ಗೌಡ ಪ್ರಧಾನಿ ಮೋದಿಯೊಂದಿಗಿನ ಮಾತುಕತೆಯನ್ನು ಹಂಚಿಕೊಂಡರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net