ಜನ್ಮದಿನದ ಶುಭಕೋರಿದ ಪ್ರಧಾನಿ ಮೋದಿ ಟ್ವೀಟ್​ಗೆ ಸೋಮಣ್ಣ ಭಾವುಕ

v.somsnna _modi
Published on

ತುಮಕೂರು: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ 74ನೇ ಜನ್ಮದಿನ ಅಂಗವಾಗಿ ಪತ್ನಿ ಶೈಲಜಾ ಸಮೇತ ಸಿದ್ದಗಂಗಾ ಮಠಕ್ಕೆ ಶನಿವಾರ ಭೇಟಿ ನೀಡಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು. ಸೋಮಣ್ಣರನ್ನು ಮುಖ್ಯಮಂತ್ರಿ ಆಗಲಿ ಎಂದು ಆಶೀರ್ವದಿಸುವಂತೆ ಸಿದ್ದಗಂಗಾ ಶ್ರೀಗಳಿಗೆ ಗ್ರಾಮಾಂತರ ಶಾಸಕ ಬಿ.ಸುರೇಶ್​ಗೌಡ ಹೇಳಿದ್ದು ಸಂಚಲನಕ್ಕೆ ಸೃಷ್ಟಿಸಿತು.

ಶ್ರೀಗಳೊಂದಿಗೆ ಕೆಲ ಸಮಯ ಸಮಾಲೋಚನೆ ನಡೆಸಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಪಕ್ಷ$ವು ನನಗೆ ಕೊಟ್ಟಿರುವ ಜವಾಬ್ದಾರಿ ಖುಷಿ ನೀಡಿದೆ. ವರಿಷ್ಠರು ಕೊಡುತ್ತಿರುವ ಸಹಕಾರ ಇನ್ನಷ್ಟು ಕೆಲಸ ಮಾಡಲು ಪ್ರೇರಣ ನೀಡಿದೆ. ನನ್ನ ಆರಾಧ್ಯದೈವರ ಸನ್ನಿಧಿಗೆ ಬಂದು ಹುಟ್ಟುಹಬ್ಬದ ಸಂದರ್ಭದಲ್ಲಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದರು.

ಮೋದಿ ಟ್ವೀಟ್​ಗೆ ಸೋಮಣ್ಣ ಭಾವುಕ: ದೇಶದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಹುಟ್ಟುಹಬ್ಬದ ಶುಭಶಯ ಕೋರಿದ್ದಾರೆ. ಆ ಟ್ವೀಟ್​ ಓದಿದರೆ ನಿಜಕ್ಕೂ ಖುಷಿಯಾಗುತ್ತದೆ. ದೇಶ ಮೊದಲು ಎನ್ನುವ ಅವರ ಹೇಳಿಕೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಎಲ್ಲದಕ್ಕಿಂತ ದೊಡ್ಡದ್ದು ದೇಶ ಎನ್ನುವುದು. ನನ್ನ ಸಂಪುಟದಲ್ಲಿ ನೀವು ಇದ್ದೀರಾ, ನಿಮಗೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸವನ್ನು ದೇಶಕ್ಕಾಗಿ ಮಾಡಿ, ಈ ದೇಶದ ಮುಂದಿನ ಪೀಳಿಗೆಗೆ ಏನಾದರು ಕೊಡುಗೆ ಕೊಡಿ ಎಂದು ಟ್ವೀಟಿಸಿರ ಆಶಿಸಿದ್ದಾರೆ ಎಂದು ಸಚಿವ ಸೋಮಣ್ಣ ಹೇಳಿದರು.

ಗೃಹ ಸಚಿವ ಅಮಿತ್​ ಷಾ ಕೂಡಾ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದು 73 ವರ್ಷ ತುಂಬಿತಾ ನಿಮಗೆ ಎಂದು ಆಶ್ಚರ್ಯದಿಂದ ಕೇಳಿದರು. ನಾನು ಒಳ್ಳೆಯ ಕೆಲಸ ಮಾಡುತ್ತೀನಿ ಎನ್ನುವ ನಂಬಿಕೆ ಅವರಿಗಿದೆ. ಅವರ ನಂಬಿಕೆಗೆ ಪೂರಕವಾಗಿ ನಾನು ಕೆಲಸ ಮಾಡಿ ತೋರಿಸುತ್ತೇನೆ ಎಂದರು.
ರಾಜ್ಯ ಸರ್ಕಾರ ಕೊಬ್ಬರಿ ಖರೀದಿಯನ್ನು ಮೂರೇ ಮೂರು ಜಿಲ್ಲೆಗೆ ಸೀಮಿತಗೊಳಿಸಿತ್ತು. ನಾನು ಖುದ್ದು ಕೃಷಿ ಇಲಾಖೆ ಸಚಿವರು, ಸಹಕಾರ ಸಚಿವರು ಹಾಗೂ ಕಾರ್ಯದರ್ಶಿ ಅಜಯ್​ ನಾಗಭೂಷಣ್​ಗೆ ದೂರವಾಣಿ ಕರೆ ಮಾಡಿ ಮಾತನಾಡಿ ಮತ್ತೆ 7 ಜಿಲ್ಲೆಗಳನ್ನು ಸೇರಿಸಿ ಹೆಚ್ಚುವರಿ ಕೊಬ್ಬರಿ ಖರೀದಿಗೆ ಆದೇಶ ಮಾಡಿಸಿರುವುದಾಗಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಬಿ. ಸುರೇಶ್​ಗೌಡ, ಜಿ.ಬಿ. ಜ್ಯೋತಿಗಣೇಶ್​, ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​, ಎಸ್​.ಡಿ.ದಿಲೀಪ್​ ಕುಮಾರ್​, ಪಾಲನೇತ್ರ, ಚಂದ್ರಶೇಖರ್​ ಬಾಬು ಮತ್ತಿತರರು ಉಪಸ್ಥಿತರಿದ್ದರು.


ಮಳೆಗಾಲದಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಈಗ ಮಳೆಗಾಲ ಆಗಿರುವುದರಿಂದ ರೈಲುಗಳ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯವಾಗುತ್ತಿದೆ. ಎಲ್ಲಾ ರೈಲುಗಳ ಪ್ರಯಾಣದಲ್ಲಿ ವಿಳಂಬ ಆಗಿಲ್ಲ. ಒಂದು ಹಳಿಯ ಮೇಲೆ ಒಂದೇ ರೈಲು ಹೋಗಲಿಕ್ಕೆ ಸಾಧ್ಯ. ಹಾಗಾಗಿ, ರೈಲ್ವೆ ಸಂಚಾರದ ವೇಳಾಪಟ್ಟಿಯಲ್ಲಿ ವ್ಯತ್ಯಾಸ ಆಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದರು. ಮಳೆಗಾಲ ಆಗಿರುವುದರಿಂದ ತಾಂತ್ರಿಕವಾಗಿ ಸಮಸ್ಯೆ ಆಗಿದೆ ಅಷ್ಟೆ. ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂದು ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ 5 ರೈಲ್ವೆ ಮೇಲ್ಸೇತುವೆ ನಿಮಾರ್ಣ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿಸಿದ್ದು, 350 ಕೋಟಿ ರೂ.ಗಳನ್ನು ಈ ಕಾರ್ಯಕ್ಕೆ ಭರಿಸಲಿದೆ. ಈ ಹಿಂದಿನ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಶೇ. 50 ರಷ್ಟು ಹಣ ಕೊಡಬೇಕಾಗುತ್ತದೆ. ಆದರೆ, ಈಗ ಕೊಡುತ್ತದೋ, ಬಿಡುತ್ತದೋ ನನಗೆ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net