ಪ್ರತಿ ಹೆಜ್ಜೆಗೂ ಯುವ ಜನತೆಗೆ ಪ್ರಧಾನಿ ಮೋದಿ ಸ್ಫೂರ್ತಿ ತುಂಬುತ್ತಿದ್ದಾರೆ: ಸಿಎಂ ಬಸವರಾಜ ಬೊಮ್ಮಾಯಿ‌

Bommai
Published on

ಬೆಂಗಳೂರು: ಪ್ರತಿಯೊಂದು ವಿಷಯ, ಅಂಶಕ್ಕೂ ಸೂಕ್ಷ್ಮವಾಗಿ ಸ್ಪಂದಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತ ಹಾಗೂ ಭಾರತೀಯತೆಗೆ ಸದಾ ತುಡಿತ, ಮಿಡಿಯುತ್ತಿದ್ದು, ಪ್ರತಿ ಹೆಜ್ಜೆಗೂ ಯುವ ಜನತೆಗೆ ಸ್ಫೂರ್ತಿ ತುಂಬುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ವಿಧಾನ ಸೌಧ ಮುಂಭಾಗದಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಆಯೋಜಿಸಿದ್ದ ಒಲಿಂಪಿಕ್ ನಲ್ಲಿ ಪಾಲ್ಗೊಂಡಿರುವ ದೇಶದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಸೈಕಲ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಚ್ಛ ಭಾರತದಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮದಲ್ಲಿ ಮೋದಿಯವರ ಸೂಕ್ಷ್ಮ ಸಂವೇದನೆ ಎದ್ದು ಕಾಣುತ್ತದೆ. ಖೇಲೋ ಇಂಡಿಯಾ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಿದರೆ, ಜೀತೋ ಇಂಡಿಯಾ ಎಂದು ಹೇಳುವ ಮೂಲಕ ಕ್ರೀಡಾಪಟುಗಳಿಗೆ ಹುರಿದುಂಬಿಸಿದ್ದು, ಅದರ ಭಾಗವಾಗಿ ದೇಶಾದ್ಯಂತ ನಡೆಯುತ್ತಿರುವ ಸೈಕಲ್ ರ್ಯಾಲಿಯಲ್ಲಿ 56,000 ಯುವ ಜನರು ಪಾಲ್ಗೊಳ್ಳುತ್ತಿದ್ದಾರೆ ಎಂದು ಬೊಮ್ಮಾಯಿ‌ ತಿಳಿಸಿದರು.

ಯುವ ಜನತೆ ದೇಶದ ಶಕ್ತಿ ಹಾಗೂ ಭವಿಷ್ಯವಾಗಿದ್ದು, ಶಿಸ್ತಿನಿಂದ ಒಳ್ಳೆಯ ನಡವಳಿಕೆ ರೂಪುಗೊಳ್ಳುತ್ತದೆ. ನಾನು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಯುವ ಸಮೂಹ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ನನ್ನ ಮುಂದಿನ ಕಾರ್ಯಕ್ರಮಗಳಲ್ಲಿ ಯುವ ಜನತೆಗೆ ಪ್ರಾಶಸ್ತ್ಯ ಸಿಗಲಿದೆ ಎಂದು ಸಿಎಂ ಬೊಮ್ಮಾಯಿ‌ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net