More

    5 ಸಾವಿರ ಅಕ್ರಮ ಕಟ್ಟಡ ಶೀಘ್ರ ನೆಲಸಮ: ಸರ್ಕಾರಿ ಜಮೀನು ಒತ್ತುವರಿ; ಬಿಬಿಎಂಪಿ, ಬಿಡಿಎ, ಕಂದಾಯ ಇಲಾಖೆಗಳ ಕಾರ್ಯಾಚರಣೆ

    | ಸತೀಶ್ ಕಂದಗಲ್​ಪುರ ಬೆಂಗಳೂರು

    ಉದ್ಯಾನನಗರಿಯಲ್ಲಿ ಅಂದಾಜು 5 ಸಾವಿರ ಕಟ್ಟಡಗಳನ್ನು ಒತ್ತುವರಿ ಜಾಗದಲ್ಲಿ ನಿರ್ವಿುಸಲಾಗಿದ್ದು, ಅವುಗಳ ತೆರವು ನಿಶ್ಚಯವಾಗಿದೆ. ಬಿಬಿಎಂಪಿ, ಬಿಡಿಎ ಹಾಗೂ ಬೆಂಗಳೂರು ನಗರ ಜಿಲ್ಲೆಯ ಕಂದಾಯ ಇಲಾಖೆಗಳು ಪ್ರತ್ಯೇಕ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿವೆ. ಇದರಿಂದ ತಮ್ಮದಲ್ಲದ ಸ್ಥಳದಲ್ಲಿ ಕಟ್ಟಡ ನಿರ್ವಿುಸಿದ ಮಾಲೀಕರಿಗೆ ಆತಂಕ ಶುರುವಾಗಿದೆ.

    ಸರ್ಕಾರ ಹಾಗೂ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಆಸ್ತಿಗಳನ್ನು ಹಲವರು ರಾಜಕಾಲುವೆ, ಮೈದಾನ, ಉದ್ಯಾನಗಳು, ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ವಿುಸಿಕೊಂಡಿದ್ದಾರೆ. 5 ಸಾವಿರಕ್ಕೂ ಅಧಿಕ ಕಟ್ಟಡಗಳು ಭಾಗಶಃ ಮತ್ತು ಪೂರ್ಣ ಒತ್ತುವರಿ ಮಾಡಿಕೊಂಡ ಅಂಶ ಸಮೀಕ್ಷೆಯಿಂದ ಬೆಳಕಿಗೆ ಬರಲಿದೆ. ಒತ್ತುವರಿ ತೆರವು ನೋಟಿಸ್ ನೀಡಿದಾಕ್ಷಣ ಮಾಲೀಕರು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಈ ಬಗ್ಗೆ ನ್ಯಾಯಾಲಯ ವಿಚಾರಣೆಯಲ್ಲಿ ಒತ್ತುವರಿ ಸಾಬೀತಾಗಿ ತೆರವು ಆದೇಶ ನೀಡಿದರೂ ಮನೆ ಖಾಲಿ ಮಾಡದ ಸಾಕಷ್ಟು ಜನರಿದ್ದಾರೆ. ಈಗ ಸ್ಥಳೀಯ ಆಡಳಿತ ಸಂಸ್ಥೆಗಳು ಒತ್ತುವರಿ ತೆರವು ಆರಂಭಿಸಿವೆ.

    ಪಾಲಿಕೆಯಿಂದ 728 ಕಡೆ ತೆರವು: ಬಿಬಿಎಂಪಿ ದಾಖಲೆ ಪ್ರಕಾರ ಒಟ್ಟು 1,953 ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ಗುರುತಿಸಲಾಗಿತ್ತು. 2016ರಲ್ಲಿ ದೊಡ್ಡ ಬೊಮ್ಮಸಂದ್ರ, ಆವನಿ ಶೃಂಗೇರಿನಗರ ಹಾಗೂ ಇನ್ನಿತರ ಪ್ರದೇಶ ಸೇರಿ 822 ಕಡೆಗಳಲ್ಲಿ ಒತ್ತುವರಿ ಮಾಡಿದ್ದ ಕಟ್ಟಡಗಳನ್ನು ಕೆಡವಲಾಗಿತ್ತು. 2017ರಲ್ಲಿ ಮತ್ತೆ ತೆರವು ಕಾರ್ಯಾಚರಣೆ ನಡೆಸಿ 403 ಕಡೆಗಳಲ್ಲಿನ ಒತ್ತುವರಿ ತೆರವು ಮಾಡಿ, ಭೂಮಿ ವಶಕ್ಕೆ ಪಡೆಯಲಾಗಿತ್ತು. ಆನಂತರ ಪ್ರಭಾವಿಗಳ ಒತ್ತುವರಿ ಸ್ಥಳದಲ್ಲಿ ಕಾರ್ಯಾಚರಣೆ ಸ್ಥಗಿತ ಮಾಡಲಾಗಿತ್ತು. ಉಳಿದಂತೆ 728 ಕಡೆಗಳಲ್ಲಿ ಒತ್ತುವರಿ ತೆರವು ಬಾಕಿಯಿದೆ. 2020ರಲ್ಲಿ ತೆರವು ಕಾರ್ಯ ಪುನಾರಂಭಕ್ಕೆ ಸಿದ್ಧತೆ ನಡೆಸಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ನ್ಯಾಯಾಲಯ ಸೂಚನೆ ಮೇರೆಗೆ ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಿದ್ದು, ಈವರೆಗೂ ಆರಂಭವಾಗಿಲ್ಲ.

    ಸದ್ಯದಲ್ಲೇ 2 ಸಾವಿರ ಎಕರೆ ವಶ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಬಡಾವಣೆ ನಿರ್ವಣ, ವಾಣಿಜ್ಯ ಸಂಕೀರ್ಣ ಹಾಗೂ ಇತರೆ ಉದ್ದೇಶಕ್ಕಾಗಿ ಮೀಸಲಿಟ್ಟ ಭೂಮಿಯಲ್ಲಿ ಒಟ್ಟು 2 ಸಾವಿರಕ್ಕೂ ಅಧಿಕ ಭೂಮಿ ಒತ್ತುವರಿ ಆಗಿದೆ. ಶಿವರಾಮ ಕಾರಂತ ಬಡಾವಣೆ, ಎಚ್.ಬಿ.ಆರ್. ಲೇಔಟ್, ಬನಶಂಕರಿ, ಅಂಜನಾಪುರ ಬಡಾವಣೆಗಳಲ್ಲಿ ಒತ್ತುವರಿ ಪ್ರಮಾಣ ಹೆಚ್ಚಾಗಿದೆ. ಮೊದಲು ಶಿವರಾಮ ಕಾರಂತ ಬಡಾವಣೆಯಲ್ಲಿ ಒತ್ತುವರಿ ತೆರವು ಮಾಡಿ, ಮುಂದಿನ ದಿನಗಳಲ್ಲಿ ಎಲ್ಲ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಬಿಡಿಎ ಮುಖ್ಯ ಇಂಜಿನಿಯರ್ ಡಾ.ಎಚ್.ಆರ್. ಶಾಂತರಾಜಣ್ಣ ತಿಳಿಸಿದ್ದಾರೆ.

    5 ಸಾವಿರ ಅಕ್ರಮ ಕಟ್ಟಡ ಶೀಘ್ರ ನೆಲಸಮ: ಸರ್ಕಾರಿ ಜಮೀನು ಒತ್ತುವರಿ; ಬಿಬಿಎಂಪಿ, ಬಿಡಿಎ, ಕಂದಾಯ ಇಲಾಖೆಗಳ ಕಾರ್ಯಾಚರಣೆಪ್ರತಿ ಶನಿವಾರ ತೆರವು ಕಾರ್ಯಾಚರಣೆ: ಬೆಂಗಳೂರು ನಗರ ಜಿಲ್ಲಾಡಳಿತ ವ್ಯಾಪ್ತಿಗೆ ಒಳಪಟ್ಟ ತಾಲೂಕು ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 600ಕ್ಕೂ ಅಧಿಕ ಎಕರೆ ಕೆರೆಯ ಭೂಮಿ ಒತ್ತುವರಿ ಆಗಿರುವ ಅಂಶ ಬೆಳಕಿಗೆ ಬಂದಿದೆ. ಈ ಒತ್ತುವರಿ ತೆರವುಗೊಳಿಸಿ ಕಂದಾಯ ಇಲಾಖೆ ಎಲ್ಲ ಆಸ್ತಿಗಳನ್ನು ಸಂರಕ್ಷಣೆ ಮಾಡಲಿಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಶನಿವಾರ ಕೆರೆ ಮತ್ತು ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುತ್ತಿದೆ. ಈಗ 210 ಎಕರೆ ಪ್ರದೇಶ ಒತ್ತುವರಿ ತೆರವು ಮಾಡಿದ್ದು, 400ಕ್ಕೂ ಅಧಿಕ ಭೂಒತ್ತುವರಿಯನ್ನು ಹಂತ ಹಂತವಾಗಿ ತೆರವು ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಮಾಹಿತಿ ನೀಡಿದ್ದಾರೆ.

    ಬಿಡಿಎ ವತಿಯಿಂದ 800 ಕಟ್ಟಡ ತೆರವು ಬಾಕಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 3,500 ಎಕರೆಗೂ ಅಧಿಕ ಭೂಮಿಯಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ವಿುಸಿದೆ. ಇದಕ್ಕಾಗಿ ಸ್ವಾಧೀನ ಮಾಡಿಕೊಂಡ ಸ್ವತ್ತಿನಲ್ಲಿ ಕೆಲವರು ಅನಧಿಕೃತವಾಗಿ ಕಟ್ಟಡ ನಿರ್ವಿುಸಿಕೊಂಡಿದ್ದಾರೆ. ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಒತ್ತುವರಿ ತೆರವಿಗೆ ಆದೇಶ ನೀಡಿದ್ದು, ಪ್ರತಿ 15 ದಿನಗಳಿಗೊಮ್ಮೆ ವರದಿ ನೀಡುವಂತೆ ಸೂಚಿಸಿದೆ. ಕಳೆದ ವಾರ 18 ಮನೆಗಳನ್ನು ತೆರವು ಮಾಡಿದೆ. ಪ್ರತಿ ತಿಂಗಳು ಡ್ರೋನ್ ಮೂಲಕ ಸಮೀಕ್ಷೆ ಮಾಡುತ್ತಿದ್ದು, ಇನ್ನೂ 800 ಅನಧಿಕೃತ ಕಟ್ಟಡ ತೆರವು ಬಾಕಿಯಿದೆ. ಆ.15ರ ಒಳಗಾಗಿ ತೆರವು ಮಾಡಲಾಗುತ್ತದೆ.

    ಒತ್ತುವರಿಯಾಗಿದ್ದ 7 ಎಕರೆ ಮರುವಶ: ಭೂಕಬಳಿಕೆದಾರರು ನಗರದ ವಿವಿಧೆಡೆ ಒತ್ತವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಿ, ಮರುವಶಕ್ಕೆ ಪಡೆಯುವ ಕಾರ್ಯವನ್ನು ಬೆಂಗಳೂರು ಜಿಲ್ಲಾಡಳಿತ ಚುರುಕುಗೊಳಿಸಿದೆ. ದಕ್ಷಿಣ ವಲಯ ಉಪ ವಿಭಾಗಾಧಿಕಾರಿ ಡಾ.ಎಂ.ಜಿ. ಶಿವಣ್ಣ, ತಹಸೀಲ್ದಾರ್ ಪಿ. ದಿನೇಶ್ ನೇತೃತ್ವದ ತಂಡ ಎಲೆಕ್ಟ್ರಾನಿಕ್ಸ್ ಸಿಟಿಯ ಹುಲಿಮಂಗಲ ಮುಖ್ಯರಸ್ತೆ ಸಮೀಪದ ಗೋಮಾಳದಲ್ಲಿ 35 ಎಕರೆ ಪೈಕಿ 4.39 ಎಕರೆಯನ್ನು ತೆರವು ಮಾಡಿದೆ. 15 ಕೋಟಿ ರೂ. ಮೌಲ್ಯದ ಜಮೀನು ಇದಾಗಿದೆ. ಯಲಹಂಕ ಹೋಬಳಿಯ ಚಿಕ್ಕಬೆಟ್ಟಹಳ್ಳಿಯ 2 ಎಕರೆ 20 ಗುಂಟೆ ಜಮೀನನ್ನು ತಹಸೀಲ್ದಾರ್ ನರಸಿಂಹಮೂರ್ತಿ ನೇತೃತ್ವದ ತಂಡ ವಶಕ್ಕೆ ಪಡೆದಿದೆ. ಚಿಕ್ಕಬೆಟ್ಟಹಳ್ಳಿಯಲ್ಲಿ ಶಾರದಾ ವಿದ್ಯಾಸಂಸ್ಥೆಗೆ ಜಿಲ್ಲಾಡಳಿತ ಮೂಲಕ 2 ಎಕರೆ 20 ಗುಂಟೆ ಭೂಮಿಯನ್ನು ಗುತ್ತಿಗೆ ನೀಡಲಾಗಿತ್ತು. ಆದರೆ, ಈ ಜಾಗದಲ್ಲಿ ಶಾಲೆ ನಡೆಸದೆ ಮಾಜಿ ಸಂಸದ ಶಿವರಾಮೇಗೌಡ ಮಾಲೀಕತ್ವದ ಕಾನ್​ಕಾರ್ಡ್ ಶಿಕ್ಷಣ ಸಮೂಹಕ್ಕೆ ಬಾಡಿಗೆ ನೀಡಲಾಗಿತ್ತು.

    ರಾಜ್ಯದಲ್ಲಿ ಇನ್ನೂ ಎರಡು ವಾರ ನೈಟ್​ ಕರ್ಫ್ಯೂ; ಕರೊನಾ ಆತಂಕ ಹೆಚ್ಚಳ, ಮತ್ತಷ್ಟು ಕಟ್ಟುನಿಟ್ಟು…

    ‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts