ಪಿಎಲ್‌ಡಿ ಬ್ಯಾಂಕ್ ಗದ್ದುಗೆಗೆ ಜಿದ್ದಾಜಿದ್ದಿ

FotoJet
Published on

ಕಾಂಗ್ರೆಸ್ ಒಳಜಗಳದ ಲಾಭ ಬಿಜೆಪಿಗೆ? ಕುತೂಹಲ ಹೆಚ್ಚಿಸಿದ ಅಭ್ಯರ್ಥಿಗಳ ಪೈಪೋಟಿ

ಗುಡಿಬಂಡೆ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಮುಗಿಯುತ್ತಿದ್ದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗಾದಿಗೆ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇದ್ದರೂ ಅಧ್ಯಕ್ಷ ಗಾದಿಗೆ ನೀನಾ-ನಾನಾ ಎಂಬ ಪೈಪೋಟಿ ಜೋರಾಗಿದೆ. ಹಾಗಾಗಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಬೆಂಬಲಿತರಿಗೇ ಲಭಿಸುವುದೋ ಅಥವಾ ಕಾಂಗ್ರೆಸ್ ಒಳಜಗಳದ ಲಾಭದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಾಗುವುದೋ ಎಂಬುದನ್ನು ಕಾದು ನೋಡಬೇಕಿದೆ.

ಹೌದು. ಇದೇ ಮೊದಲ ಬಾರಿಗೆ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಜಿದ್ದಾಜಿದ್ದಿ ನಡೆದಿದ್ದು, ಜತೆಗೆ ಉಚ್ಚ ನ್ಯಾಯಾಲಯದ ಮೊರೆ ಹೋಗಿ ಹೆಚ್ಚುವರಿ ಮತಗಳನ್ನು ತಂದು ಚುನಾವಣೆ ಎದುರಿಸಿದ್ದಾರೆ. ಇನ್ನು ಅಧ್ಯಕ್ಷರ ಪಟ್ಟಕ್ಕೆ ಇನ್ನೆಷ್ಟು ಪೈಪೋಟಿ ನಡೆಯಬಹುದೆಂಬ ಮಾತುಗಳು ತಾಲೂಕಿನ ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಅಭ್ಯರ್ಥಿಗಳು: ಉಲ್ಲೋಡು ಕ್ಷೇತ್ರದ ಇಡ್ರಹಳ್ಳಿ ಅಮರನಾರಾಯಣರೆಡ್ಡಿ, ಹಳೇ ಗುಡಿಬಂಡೆ ಕ್ಷೇತ್ರದ ಎಚ್.ಪಿ.ಲಕ್ಷ್ಮೀನಾರಾಯಣ, ದಪ್ಪರ್ತಿ ಕ್ಷೇತ್ರದ ಮಾಚಹಳ್ಳಿ ಶಿವಣ್ಣ, ಹಂಪಸಂದ್ರ ಕ್ಷೇತ್ರದ ಕಡೇಹಳ್ಳಿ ಆನಂದರೆಡ್ಡಿ, ಪೋಲಂಪಲ್ಲಿ ಕ್ಷೇತ್ರ ಪಿ.ಸಿ.ಮಂಜುನಾಥ್, ಬೀಚಗಾನಹಳ್ಳಿ ಕ್ಷೇತ್ರದ ಸರಸ್ವತಮ್ಮ ಮತ್ತು ನಾಮನಿರ್ದೇಶಿತ ಸದಸ್ಯ ರಾಜಾರೆಡ್ಡಿ ಸೇರಿ ಒಟ್ಟು 7 ನಿರ್ದೇಶಕರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೆಂದು ಅಧಿಕೃತವಾಗಿ ತಿಳಿದುಬಂದಿದೆ. ಉಳಿದಂತೆ ಚೆಂಡೂರು ಕ್ಷೇತ್ರದ ಆರ್. ಸುನೀತಾ, ಎಲ್ಲೋಡು ಕ್ಷೇತ್ರದ ಅಶ್ವತ್ಥರೆಡ್ಡಿ, ತಿರುಮಣಿ ಕ್ಷೇತ್ರದ ವೆಂಕಟೇಶಪ್ಪ, ಸಾಲಗಾರರಲ್ಲದ ಕ್ಷೇತ್ರದ ಎಂ.ಆನಂದ್ ಸೇರಿ ಒಟ್ಟು 4 ನಿರ್ದೇಶಕರು ಅಧಿಕೃತವಾಗಿ ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿದ್ದಾರೆ. ವರ‌್ಲಕೊಂಡ ಕ್ಷೇತ್ರದ ರಾಘವೇಂದ್ರ, ಸೋಮೇನಹಳ್ಳಿ ಕ್ಷೇತ್ರದ ವೆಂಕಟೇಶಪ್ಪ, ಗುಡಿಬಂಡೆ ಕ್ಷೇತ್ರದ ಭತ್ತಲಹಳ್ಳಿ ವೆಂಕಟೇಶಪ್ಪ ಸೇರಿ 3 ನಿರ್ದೇಶಕರು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದಿದ್ದರೂ ಯಾರಿಗೆ ಬೆಂಬಲ ನೀಡುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಇನ್ನು ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 14 ಮತಗಳು ಚಲಾವಣೆ ಮಾಡಬೇಕಾಗಿದ್ದು, ಮಾ.10ರಂದು ನಡೆಯುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯುತ್ತದೆಯೋ ಎಂಬುದು ರೋಚಕವಾಗಿದೆ.

ತೀವ್ರ ಕುತೂಹಲ

ಶನಿವಾರ ಮೂರು ಕ್ಷೇತ್ರಗಳ ಚುನಾವಣೆ ಫಲಿತಾಂಶ ಘೋಷಣೆ ಆಗುತ್ತಿದ್ದಂತೆ ಸಂಸದ ಡಾ. ಕೆ. ಸುಧಾಕರ್ ಅವರ ಚಿಕ್ಕಪ್ಪ ಚನ್ನಕೃಷ್ಣಾರೆಡ್ಡಿ ಆಗಮಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಶುಭಾಶಯ ಕೋರಿ, ಪೆರೇಸಂದ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಜತೆ ಸಭೆ ನಡೆಸಿದರು. ಏನೇ ಆಗಲೀ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿದ್ದ ತಿರುಮಣಿ ವೆಂಕಟೇಶಪ್ಪ ಈಗ ಬಿಜೆಪಿ ಅಭ್ಯರ್ಥಿಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದು, ಅಧ್ಯಕ್ಷರ ಪಟ್ಟಕ್ಕಾಗಿ ಪಕ್ಷ ಬದಲಿಸಿದರಾ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಅಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಪಕ್ಷದ ಒಳಜಗಳದಿಂದ ಈ ಹಿಂದೆ ಪಟ್ಟಣ ಪಂಚಾಯಿತಿಯಲ್ಲಿ ಬಹುಮತವಿಲ್ಲದಿದ್ದರೂ ಪಕ್ಷದ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಿದಂತೆ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲೂ ನಡೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಸಂದೇಶವಾಗಿದೆ.

ತಡೆಯಾಜ್ಞೆ

ಈಗಾಗಲೇ ಬೀಚಗಾನಹಳ್ಳಿ ಕ್ಷೇತ್ರದ ಅಭ್ಯರ್ಥಿ ಪ್ರಭಾವತಿ ಅವರು ಉಪ ನಿಬಂಧಕರು ಅನುಮೋದಿಸುವ ಮತಗಳಲ್ಲಿ ಜಯಗಳಿದ್ದು, ಚಿಕ್ಕಬಳ್ಳಾಪುರ ಉಪನಿಬಂಧಕರ ನ್ಯಾಯಾಲಯದಲ್ಲಿ ದಾವೆ ಹೂಡುತ್ತಿದ್ದು, ಉಚ್ಚ ನ್ಯಾಯಾಲಯದ ಮೊರೆ ಹೋಗಿ ಹೆಚ್ಚುವರಿ ಮತಗಳನ್ನು ತಂದಿರುವ ಅನರ್ಹ ಮತದಾರರನ್ನು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಉಪನಿಬಂಧಕರು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ತಡೆಯಾಜ್ಞೆ ತರುತ್ತಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net