

ಪರಿಸರ ದಿನದ ನಿಮಿತ್ಯ ವಿಜಯವಾಣಿಯಿಂದ ಚಿತ್ರ ಬಿಡಿಸುವ ಸ್ಪರ್ಧೆ
ಚಿತ್ರ ಬಿಡಿಸಿ ಪರಿಸರ ಕಾಳಜಿ ಮೆರೆದ ನೂರಾರು ಮಕ್ಕಳು
ರಾಮನಗರ: ರಾಜ್ಯದ ನಂ.1 ಕನ್ನಡ ದಿನ ಪತ್ರಿಕೆ ‘ವಿಜಯವಾಣಿ’ಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದ ಯೂನಿವರ್ಸಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ನೂರಾರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಪರಿಸರ ಕಾಳಜಿಯ ತಮ್ಮದೇ ಪರಿಕಲ್ಪನೆಯನ್ನು ಚಿತ್ರದ ಮೂಲಕ ತೆರೆದಿಟ್ಟರು. ಪ್ರತಿ ವರ್ಷದಂತೆ ಈ ಬಾರಿಯೂ ವಿಜಯವಾಣಿ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಜಿಲ್ಲೆಯ ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನೂರಾರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.
ಪರಿಸರ ಸಂರಕ್ಷಣೆಗೆ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಅದು ಸಾಲದು. ಅಭಿವೃದ್ಧಿಗಾಗಿ ಪರಿಸರ ಸಾಶವಾಗುತ್ತಿದೆ. ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ಕಾಳಜಿ ವಹಿಸಿದರೆ ಮಾತ್ರ ಭವಿಷ್ಯದ ದಿನಗಳು ಉತ್ತಮವಾಗಿರುತ್ತದೆ. ಪತ್ರಿಕೆಯ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದರು.
ಈ ವೇಳೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ತಹಸೀಲ್ದಾರರಾದ ಚೇತನಾ, ಮೇಘನಾ, ಯೂನಿವರ್ಸಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಚೇತನ್, ವಿಜಯವಾಣಿ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿದ್ಯಾಧರ್, ಸಿಆರ್ಪಿಗಳಾದ ಮುನಿಯಪ್ಪ, ಮಂಜುನಾಥ್, ಶಾಲೆಯ ಸಿಬ್ಬಂದಿ ಮಂಜುಳಾ, ಬಾನುಮತಿ, ಗೀತಾ, ದೀಪಿಕಾ, ವಿದ್ಯಾ, ವಿನೋದ, ಧರಣೇಶ್, ಪಾರ್ವತಿ, ಸುರೇಶ್, ಮಹಾಲಕ್ಷ್ಮಿ, ನೇಹಾ ಶಬನಂ, ರಮ್ಯ, ವರಲಕ್ಷ್ಮೀ, ದಿವ್ಯಾ, ವಿಜಯವಾಣಿಯ ಶಿವಲಿಂಗಯ್ಯ, ಅಭಿಲಾಷ್, ಚೇತನ್, ಸುರೇಶ್, ಮಹೇಶ್ ಇದ್ದರು.
ಸಸಿನೆಟ್ಟು ಪೋಷಿಸುವ ಸಂಕಲ್ಪ ಮಾಡಿ ರಾಮನಗರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಮಹಮದ್ ಮನ್ಸೂರ್ ಮಾತನಾಡಿ, ಪ್ಲಾಸ್ಟಿಕ್ ಸೇರಿ ವಿವಿಧ ಕಾರಣಗಳಿಂದ ಸಾಕಷ್ಟು ಪರಿಸರ ಕಲುಷಿತವಾಗುತ್ತಿದೆ. ಆದಷ್ಟೂ ಪ್ಲಾಸ್ಟಿಕ್ ಬಳಕೆ ಕಡಿತಗೊಳಿಸಿಕೊಳ್ಳಬೇಕು. ಮರ ಇದ್ದರೆ ಜೀವನ, ಇಲ್ಲದಿದ್ದರೆ ಜೀವನವೂ ಇಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಶುದ್ಧ ಗಾಳಿ, ಶುದ್ಧನೀರು, ಶುದ್ಧ ಆಹಾರ ನಮ್ಮ ಜೀವನದ ಮೂಲ. ಎಲ್ಲವೂ ಉತ್ತಮವಾಗಿರಬೇಕು ಎಂದರೆ ಪರಿಸರ ಶುದ್ಧವಾಗಿರಬೇಕು. ಮಕ್ಕಳು ಪ್ರತಿವರ್ಷ ಒಂದು ಗಿಡನೆಡುವ ಸಂಕಲ್ಪ ಮಾಡಬೇಕು. ಮಾನವನ ಅತಿ ಆಸೆಯಿಂದ ಪರಿಸರಕ್ಕೆ ಕಂಟಕವಾಗುತ್ತಿದೆ. ವಿಜಯವಾಣಿ ಪತ್ರಿಕೆಯ ಸಾಮಾಜಿಕ ಕಾಳಜಿಗೆ ಈ ಕಾರ್ಯಕ್ರಮವೇ ಸಾಕ್ಷಿ ಎಂದರು.
ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಶಿಕ್ಷಣ ಎಂದರೆ ರ್ಯಾಂಕ್ ಗಳಿಸುವುದಲ್ಲ. ವ್ಯಕ್ತಿತ್ವ ಹಾಗೂ ಸಾಮಾಜಿಕ ಹೊಣೆಗಾರಿಕೆ ಕಲಿಯುವುದೇ ಶಿಕ್ಷಣ. ನಮ್ಮ ಭವಿಷ್ಯ ಹೇಗಿರಬೇಕು ಎಂಬುದನ್ನು ನಿರ್ಧಾರ ಮಾಡುವುದು ನಮ್ಮ ಪರಿಸರ. ನಾವು ಪರಿಸರ ಶುದ್ಧವಾಗಿಟ್ಟುಕೊಂಡರೆ ಪರಿಸರ ನಮ್ಮನ್ನು ಚೆನ್ನಾಗಿ ಇಟ್ಟುಕೊಳ್ಳುತ್ತದೆ. ಪರಿಸರದ ಕಾಳಜಿ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಪ್ಲಾಸ್ಟಿಕ್ ಎಂಬುದು ಪರಿಸರ ಹಾಗೂ ಆರೋಗ್ಯ ಎರಡಕ್ಕೂ ಹಾನಿಕಾರಕ. ಸಣ್ಣ ಸಣ್ಣ ವಿಚಾರವನ್ನು ಸಹ ಮಕ್ಕಳು ಕಲಿಯಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು, ಪ್ರಶಸ್ತಿ ಮುಖ್ಯವಲ್ಲ. ಸ್ಪರ್ಧೆಗಳ ಬಗ್ಗೆ ಹಿಂಜರಿಕೆ ಹೊಂದಿದ್ದರೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಯ್ಯ ಎಂ., ಪ್ಲಾಸ್ಟಿಕ್ವುುಕ್ತ ಮಾಡಬೇಕೆಂದು ಈ ವರ್ಷದ ವಿಶ್ವ ಪರಿಸರ ದಿನಾಚರಣೆ ಘೊಷ ವಾಕ್ಯವಾಗಿದೆ. ನಮ್ಮ ಅಕ್ಕ ಪಕ್ಕದಲ್ಲಿರುವ ಮರಗಳು ಯಾವುವು? ಅವುಗಳಿಂದ ನಮಗೆ ಏನು ಪ್ರಯೋಜನ? ಎಂದು ತಿಳಿದುಕೊಳ್ಳಬೇಕು. ನಾವು ಮರ ಬೆಳೆಸಿದರೆ ನಮ್ಮ ಮಕ್ಕಳಿಗೆ ಅದರ ಪ್ರಯೋಜನ ಸಿಗುತ್ತದೆ. ಪ್ರಕೃತಿಯಲ್ಲಿ ನಮಗೆ ಹಸಿರು ಹಾಗೂ ನೀರು ದೊರೆಯುತ್ತದೆ. ಪರಿಸರವನ್ನು ರಕ್ಷಣೆ ಮಾಡುವುದನ್ನು ಮಕ್ಕಳು ರೂಢಿಸಿಕೊಳ್ಳಬೇಕು. ನೀವು ಹೇಗೆ ಬೆಳವಣಿಗೆ ಕಾಣುತ್ತೀರಿ ಅದೇ ರೀತಿ ಒಂದು ಗಿಡ ನೆಟ್ಟು ಮರವನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ವಿಜಯವಾಣಿ ಸಹಯೋಗದೊಂದಿಗೆ ನಮ್ಮ ಶಾಲೆಯಲ್ಲಿ ಪರಿಸರದ ಬಗ್ಗೆ ಚಿತ್ರ ಕಲೆ ಸ್ಪರ್ಧೆ ಏರ್ಪಡಿಸಿರುವುದು ಹೆಮ್ಮೆಯ ವಿಚಾರ. ಮುಕ್ಕಾಲು ಭಾಗ ಅರಣ್ಯ, ಕಾಲು ಭಾಗ ಭೂಮಿ ಇದೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಪ್ರಕೃತಿಯಲ್ಲಿ ಸಿಗುವ ನೀರು, ಬೆಳಕು, ಗಾಳಿಯನ್ನು ಸೃಷ್ಟಿಸಲಾಗದು. ನಮ್ಮ ಹಿರಿಯರು ಕೊಟ್ಟ ಆಸ್ತಿಯನ್ನು ಕಾಪಾಡುತ್ತಿದ್ದೇವೆ. ಆದರೆ ಪರಿಸರವನ್ನು ಕಾಪಾಡುತ್ತಿಲ್ಲ, ಪರಿಸರವನ್ನು ಬೆಳೆಸುತ್ತಿಲ್ಲ. ಒಂದು ಮರ ಕಡೆದರೆ 5 ಮರ ನೆಡಬೇಕು. ಪ್ಲಾಸ್ಟಿಕ್ಬಳಕೆ ನಿಲ್ಲಿಸಬೇಕು. ಮನೆಗಳ ಮುಂದೆ ಗಿಡ ನೆಟ್ಟು ಪೋಷಿಸಬೇಕು.
| ಸುರೇಶ್ ಎ.ಜೆ ಯೂನಿವರ್ಸಲ್ ಪಬ್ಲಿಕ್ ಶಾಲೆ ಅಧ್ಯಕ್ಷ
8-10 ಮಂದಿಗೆ ಪ್ರಶಸ್ತಿ ಕೊಡಬೇಕು ಎಂದು ನಿರ್ಧರಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯಾರೂ ಬರಿಗೈಲಿ ಹೋಗಬಾರದು ಎಂದು ಬ್ಯಾಗ್ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ವಿಜಯವಾಣಿ ಸಮಾಜಮುಖಿ ಕಾರ್ಯಕ್ರಮಗಳಿಗೆ ಕೈ ಜೋಡಿಸಲಾಗುವುದು.
| ಲಕ್ಷ್ಮಣ್ ಗಣೇಶ್ ಜುವೆಲರ್ಸ್ ಮಾಲೀಕ
ಹಿಂದಿನ ಕಾಲದಲ್ಲಿ ಮರದ ನೆರಳಿನಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದರು. ಆದರೆ, ಇಂದಿನ ಮಕ್ಕಳಿಗೆ ಈ ಸೌಭಾಗ್ಯ ಇಲ್ಲದಿರುವುದು ದುರಂತ. ಸಾಲುಮರದ ತಿಮ್ಮಕ್ಕ ಸೇರಿ ಹಲವಾರು ಪರಿಸರ ಸಂರಕ್ಷಣೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂದಿನ ಮಕ್ಕಳು ಸಹ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಕೈಗೊಳ್ಳಬೇಕು.
| ಮಂಜುಳಾ ಬಿಆರ್ಸಿ