ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ: ಜೀವನ ಶೈಲಿ ಬದಲಿಸಿಕೊಳ್ಳಲು ಟಿ.ರಾಜಣ್ಣ ಸಲಹೆ

vijayavani
Published on

ಚಿತ್ರದುರ್ಗ: ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ ಸಲಹೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿಜಯವಾಣಿ, ದಿಗ್ವಿಜಯ ವಾಹಿನಿಯಿಂದ ಅರಣ್ಯ ಇಲಾಖೆ, ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಚಿತ್ರ ಬಿಡಿಸುವ ಸ್ಪರ್ಧೆ ವಿಜೇತರಿಗೆ ಮಂಗಳವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಪ್ಲಾಸ್ಟಿಕ್ ಮೇಲೆ ಹೆಚ್ಚು ಅವಲಂಬನೆ ಆಗಿರುವ ಕಾರಣ ಸೇವಿಸುವ ಆಹಾರ, ನೀರು, ಗಾಳಿ ಎಲ್ಲವೂ ಮಲಿನ ಆಗುತ್ತಲೇ ಇದೆ.

ಮಾನವರ ರಕ್ತದ ಕಣದಲ್ಲೂ ಪ್ಲಾಸ್ಟಿಕ್ ಅಂಶ ಸೇರಿಕೊಂಡು ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತಿದೆ. ಹೀಗಾಗಿಯೇ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಉತ್ತಮ ಪರಿಸರದೊಂದಿಗೆ ಆರೋಗ್ಯ ಕಾಪಾಡಿಕೊಳ್ಳಲು ಪ್ಲಾಸ್ಟಿಕ್ ತ್ಯಜಿಸಬೇಕು. ಸಾಮಗ್ರಿಗಳನ್ನು ತರಲು ಬಟ್ಟೆ ಚೀಲ ಬಳಸಬೇಕು.

ಸಾಧ್ಯವಾದಷ್ಟು ಪ್ಲಾಸ್ಟಿಕ್ ಕಡಿಮೆಗೊಳಿಸಿ, ಅವುಗಳನ್ನು ಸಂಗ್ರಹಿಸಿ, ಮರುಬಳಕೆಗೆ ಸಹಕರಿಸಿ. ಜೀವನ ಶೈಲಿ ಬದಲಿಸಿಕೊಳ್ಳಲು ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಜಾಗೃತಿ ಮೂಡಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಒಂದು ದಿನಕ್ಕೆ ಸೀಮಿತವಲ್ಲ
ವಲಯ ಅರಣ್ಯಾಧಿಕಾರಿ ಉಷಾರಾಣಿ ಮಾತನಾಡಿ, ಪರಿಸರದ ಬಗೆಗಿನ ಕಾಳಜಿ ಒಂದು ದಿನಕ್ಕೆ ಸೀಮಿತವಲ್ಲ. ಇದು ನಿರಂತರವಾಗಿ ನಡೆಯಬೇಕು.

ಪ್ರಾಣಿಗಳಿಗೂ ಪ್ಲಾಸ್ಟಿಕ್ ಅಂಶವಿರುವ ಆಹಾರ ತಿನ್ನಿಸುವ ಕೆಲಸವಾಗುತ್ತಿದೆ. ಇದು ಕೂಡ ನೋವಿನ ಸಂಗತಿ. ಇದರ ಬಳಕೆ ನಿಲ್ಲುವವರೆಗೂ ಮಾಲಿನ್ಯ ಸಮಸ್ಯೆ ಬಗೆಹರಿಯದು ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ್ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡವರು ಇದನ್ನು ಅನುಸರಿಸಿದರೆ ಭಾಗವಹಿಸಿದ್ದು ಕೂಡ ಸಾರ್ಥಕವಾಗಲಿದೆ.

ಪರಿಸರದ ಬಗೆಗಿನ ಪ್ರೀತಿ, ಕಾಳಜಿ ಹೀಗೆಯೇ ಮುಂದುವರಿಯಲಿ ಎಂದರು.

ಮುಖ್ಯ ಉಪಸಂಪಾದಕ ಹರ್ಷ ಪುರೋಹಿತ, ವಿಶೇಷ ವರದಿಗಾರ ಡಿಪಿಎನ್ ಶ್ರೇಷ್ಠಿ, ವರದಿಗಾರ ಕೆ.ಎಸ್.ಪ್ರಣವಕುಮಾರ್, ದಿಗ್ವಿಜಯ ವರದಿಗಾರ ಚಳ್ಳಕೆರೆ ವೀರೇಶ್, ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಎಂ.ಎಸ್.ಕುಮಾರಸ್ವಾಮಿ, ಪ್ರಸರಾಂಗ ಪ್ರತಿನಿಧಿ ಶುಭಾಕರ್, ಛಾಯಾಚಿತ್ರಗ್ರಾಹಕ ವರದರಾಜ್ ಯಾದವ್, ಅರಣ್ಯಾಧಿಕಾರಿಗಳಾದ ಜೆ.ರವಿ, ರುದ್ರಮುನಿ, ಗುರುಮೂರ್ತಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net