

ಯಲ್ಲಾಪುರ: ಪುರಾಣ ಪ್ರಸಿದ್ಧ, ವಿಶಾಲವಾದ ಕವಡಿಕೆರೆಯ ಏರಿಯಲ್ಲಿ ಬಿರುಕು ಮೂಡಿದ ಸ್ಥಳದಲ್ಲಿ ಗ್ರಾಮಸ್ಥರೇ ಪ್ಲಾಸ್ಟಿಕ್ ಮುಚ್ಚುವ ಮೂಲಕ ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ.
ಕಳೆದ ವರ್ಷ ಜೋರಾದ ಮಳೆಯ ಪರಿಣಾಮ ಕೆರೆಯ ಏರಿ ಕುಸಿಯಲಾರಂಭಿಸಿತ್ತು. ನಂತರ ಗ್ರಾಮ ಪಂಚಾಯಿತಿಯ ನೆರವಿನೊಂದಿಗೆ ಸ್ಥಳೀಯರು ಏರಿಯ ಮೇಲೆ ಮಣ್ಣು ಹಾಕಿ ದುರಸ್ತಿಗೊಳಿಸಿದ್ದರು. ಇದಾದ ನಂತರ ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ಆಗಿರಲಿಲ್ಲ.
ಇದೀಗ ಮಳೆ ಜೋರಾಗಿರುವುದರಿಂದ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದ್ದ ಏರಿಯ ಮೇಲೆ ಮತ್ತೆ ಬಿರುಕು ಮೂಡಿದೆ. ಗ್ರಾಮಸ್ಥರು ಬಿರುಕು ಮೂಡಿದ ಸ್ಥಳದಲ್ಲಿ ದೊಡ್ಡದಾದ ಪ್ಲಾಸ್ಟಿಕ್ ಮುಚ್ಚಿ, ಮಳೆ ನೀರಿನಿಂದ ಮತ್ತಷ್ಟು ಕುಸಿಯುವುದನ್ನು ತಡೆಯುವ ಯತ್ನ ಮಾಡಿದ್ದಾರೆ.
ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಗ್ರಾಮಸ್ಥರಾದ ರಾಮಕೃಷ್ಣ ಕವಡಿಕೆರೆ, ರಾಮಚಂದ್ರ ಕವಡಿಕೆರೆ, ಗಣಪತಿ ಕವಡಿಕೆರೆ ಇತರರು ಭಾಗವಹಿಸಿದ್ದರು.
ಮಳೆಗಾಲದ ನಂತರ ಈ ಸ್ಥಳದಲ್ಲಿ ತಡೆಗೋಡೆ ನಿರ್ವಿುಸಿ, ಈ ಸಮಸ್ಯೆ ಪರಿಹರಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.