ಗಿಡ ನೆಟ್ಟು ಪರಿಸರ ಉಳಿಸಿ

5blrp2
ಬೇಲೂರು ತಾಲೂಕಿನ ಹೆಬ್ಬಾಳು ಸರ್ಕಾರಿ ಪ್ರೌಢಶಾಲೆ ಆವರಣ ಗ್ರೀನರಿ ಟ್ರಸ್ಟ್‌ನಿಂದ ಪರಿಸರದ ದಿನದ ಅಂಗವಾಗಿ ಗಿಡಗಳನ್ನು ನೆಡಲಾಯಿತು.
Published on

ಬೇಲೂರು: ಸರ್ಕಾರಿ ಪ್ರೌಢಶಾಲೆ ಹೆಬ್ಬಾಳು ಹಾಗೂ ಗ್ರೀನರಿ ಟ್ರಸ್ಟ್ ಬೇಲೂರು ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಗಿಡಗಳನ್ನು ನೆಡುವುದರ ಮೂಲಕ ಗುರುವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ನೆಡುವುದರ ಮೂಲಕ ಪರಿಸರ ಉಳಿಸುವುದಕ್ಕೆ ಮುಂದಾಗಬೇಕು. ಪರಿಸರ ನಾಶ ಮತ್ತು ಪ್ಲಾಸ್ಟಿಕ್ ಬಳಕೆಯಿಂದಾಗಿ ಓಜೋನ್ ಪದರವು ನಾಶವಾಗುವ ಹಂತ ತಲುಪಿದೆ. ಆದ್ದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಸದೆ ತಮ್ಮ ಸುತ್ತಮುತ್ತಲಿನ ಪರಿಸರ, ಶಾಲೆಯ ಆವರಣದಲ್ಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಪ್ರಕೃತಿಯನ್ನು ಕಾಪಾಡಲು ಗಮನ ಹರಿಸಬೇಕು ಎಂದರು.

ಗ್ರೀನರಿ ಟ್ರಸ್ಟ್ ಕಾರ್ಯದರ್ಶಿ ಜ್ಞಾನಚಂದ್ರ ಮಾತನಾಡಿ, ವಿಶ್ವ ಪರಿಸರ ದಿನವನ್ನು ಒಂದು ದಿನಕ್ಕೆ ಸೀಮಿತ ಮಾಡದೆ ಪ್ರತಿನಿತ್ಯ ಪರಿಸರ ಕಾಪಾಡಬೇಕು. ಓಜೋನ್ ಪದರ ಶಿಥಿಲವಾಗುತ್ತಿರುವುದರಿಂದ ಸಾಕಷ್ಟು ದುಷ್ಪರಿಣಾಮಗಳನ್ನು ಕಾಣುತ್ತಿದ್ದೇವೆ. ಆದ್ದರಿಂದ ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು ಎಂದರು.

ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಉದಯಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಸುಂದರೇಶ್, ಗ್ರೀನರಿ ಟ್ರಸ್ಟ್ ಉಪಾಧ್ಯಕ್ಷ ವೆಂಕಟೇಶ್, ವ್ಯವಸ್ಥಾಪಕ ಅಧ್ಯಕ್ಷ ಚಂದ್ರಶೇಖರಯ್ಯ, ಪ್ರದೀಪ್, ಪರಮೇಶ್, ರಿಜ್ವಾನ್ ಪಾಷ, ಶಿಕ್ಷಕರಾದ ಶೋಭಾ, ಧನಂಜಯ ಮೂರ್ತಿ, ವಸಂತ, ಶೀಲಾ, ಕುಸುಮಾ, ನಾಗರಾಜು, ಶಂಕರ್ ಗಾಜಿ, ಧರ್ಮಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net