ಮಣ್ಣಿನ ಫಲವತ್ತತೆ ರಕ್ಷಣೆ ಅಗತ್ಯ :ಸುರೇಶ್ ಪ್ರಭು ಅಭಿಪ್ರಾಯ

Published on

ಪುತ್ತೂರು ಗ್ರಾಮಾಂತರ: ಅಡಕೆ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವುದು ಬಹಳ ಅಗತ್ಯ. ಅತೀ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸುವ ಬದಲು ಹಂತ-ಹಂತವಾಗಿ ಸಾವಯವ ಗೊಬ್ಬರ, ಜೀವಾಮೃತಗಳನ್ನು ಸಮಯಕ್ಕೆ ಸರಿಯಾಗಿ ಬಳಕೆ ಮಾಡುವುದರಿಂದ ಹೆಚ್ಚಿನ ಫಸಲು ಪಡೆಯಬಹುದು ಎಂದು ಪ್ರಗತಿಪರ ಕೃಷಿಕ ಸುರೇಶ್ ಪ್ರಭು ಹೇಳಿದರು.

ಮುಂಡೂರಿನ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ವತಿಯಿಂದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ, ಸಸ್ಯ ಪೋಷಕಾಂಶ ನಿರ್ವಹಣೆ ಮಾಹಿತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಅಡಕೆ ಕೃಷಿಯಲ್ಲಿ ಬೀಜದ ಆಯ್ಕೆಯೂ ಬಹಳ ಮುಖ್ಯ. ಉತ್ತಮ ಇಳುವರಿ ನೀಡುವ ಅಡಕೆ ಮರದ ಮಧ್ಯ ಅಥವಾ ಮೂರನೇ ಕೊಯ್ಲಿನ ಅಡಕೆಯನ್ನು ಬಳಕೆ ಮಾಡಿಕೊಂಡು ಸಸಿಗಳನ್ನು ಮಾಡಬೇಕು. ನೀರು ಇದೆ ಎಂಬ ಕಾರಣಕ್ಕೆ ಅಡಕೆ ತೋಟಕ್ಕೆ ಅನಗತ್ಯವಾಗಿ ನೀರು ಹಾಕಿ ಪೋಲು ಮಾಡಬಾರದು. ಬದಲಾಗಿ ನಿಯಮಿತವಾಗಿ ನೀರಿನ ಬಳಕೆ ಮಾಡಬೇಕು. ಸಾಧ್ಯವಾದಷ್ಟು ಹಟ್ಟಿ ಗೊಬ್ಬರ ಬಳಸಿಕೊಂಡು ಅಡಕೆ ಕೃಷಿ ಮಾಡಬೇಕು ಎಂದರು.

ಯೋಜನೆ ಒಕ್ಕೂಟದ ಅಧ್ಯಕ್ಷೆ ಪುಷ್ಪ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯ ವಲಯಾಧ್ಯಕ್ಷ ಸುಂದರ ಬಲ್ಯಾಯ ಮತ್ತು ಉಪಾಧ್ಯಕ್ಷ ಬಾಲಚಂದ್ರ ಗೌಡ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಶಿವರಂಜನ್ ಸ್ವಾಗತಿಸಿದರು. ಸೇವಾಪ್ರತಿನಿಧಿ ಗೀತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net