ಕಾಸರಗೋಡು : ಹಿಂದು ಐಕ್ಯವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್ ಆರೋಪ
ಕಾಸರಗೋಡು: ಬಾಂಗ್ಲಾದೇಶದ ಭಯೋತ್ಪಾದಕನಿಗೆ ಸಹಾಯ ಮಾಡಿದವರ ಬಗ್ಗೆಯೂ ಸಮಗ್ರ ತನಿಖೆ ನಡೆಸುವಂತೆ ಹಿಂದು ಐಕ್ಯವೇದಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್ ಆಗ್ರಹಿಸಿದ್ದಾರೆ. ಹಿಂದು ಐಕ್ಯವೇದಿ ಜಿಲ್ಲಾ ಸಮಿತಿ ಸಮಾವೇಶದಲ್ಲಿ ಮಾತನಾಡಿದರು.
ಕಟ್ಟರ್ ಉಗ್ರಗಾಮಿಯೊಬ್ಬನನ್ನು ಪಡನ್ನದಿಂದ ಬಂಧಿಸಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೀಡುಮಾಡಿದೆ. 2018ರಿಂದ ಕಾಞಂಗಾಡ್‌ನಲ್ಲಿ ಹಿಂದು ಮುಖಂಡರು ಮತ್ತು ದೇವಸ್ಥಾನಗಳ ಮೇಲೆ ದಾಳಿ ನಡೆಸುವ ಉದ್ದೇಶದಿಂದ ನೆಲೆಸಿರುವ ಈ ಭಯೋತ್ಪಾದಕನ ಬಗ್ಗೆ ಜಿಲ್ಲಾಡಳಿತ ಅಥವಾ ಕೇರಳ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂಬುವುದು ದುರಾದೃಷ್ಟ ಎಂದರು.
ಭಯೋತ್ಪಾದಕನನ್ನು ಬಂಧಿಸಿದ ಮಾತ್ರಕ್ಕೆ ಸಮಸ್ಯೆ ಮುಗಿಯುವುದಿಲ್ಲ. ಕಾಸರಗೋಡು ಜಿಲ್ಲೆಯಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ಜಿಲ್ಲೆಯಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವವರ ಸಂಖ್ಯೆಯೂ ದಿನಕಳೆದಂತೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ವರ್ಷಗಳಿಂದೀಚೆಗೆ ನೆಲೆಸಿರುವ ಉಗ್ರರಿಗೆ ಸಹಾಯ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಕಾನೂನಿನ ಮುಂದೆ ತರಬೇಕು. ಇವರಲ್ಲಿ ಕಾಸರಗೋಡು ಜಿಲ್ಲೆಯ ಕೆಲವು ಸರ್ಕಾರಿ ನೌಕರರು ಶಾಮೀಲಾಗಿರುವ ಬಗ್ಗೆ ಮಾಹಿತಿಯಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದರು.
ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿ ಮತ್ತು ಅಪರಾಧ ಪ್ರಕರಣದ ಆರೋಪಿಗಳನ್ನು ಗುರುತಿಸಲು ಆಯಾ ಪೊಲೀಸ್ ಠಾಣೆಗಳ ಮೂಲಕ ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಈ ಮೂಲಕ ಕಾಸರಗೋಡು ಜಿಲ್ಲೆ ಮತ್ತೊಂದು ಬಾಂಗ್ಲಾದೇಶವಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಎಸ್.ಪಿ.ಶಾಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಲ್ಲಿ ಭಯೋತ್ಪಾದನೆ ಇಂದು-ನಿನ್ನೆ ಎಂಬ ವಿಷಯದಲ್ಲಿ ನಡೆದ ಚರ್ಚೆಯಲ್ಲಿ ಐಕ್ಯವೇದಿ ಜಿಲ್ಲಾ ರಕ್ಷಣಾಧಿಕಾರಿ ಗೋವಿಂದನ್ ಮಾಸ್ಟರ್ ಕೊಟ್ಟೋಡಿ, ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ತಚ್ಚಂಗಾಡ್, ಜಿಲ್ಲಾ ಕಾರ್ಯದರ್ಶಿ ಮೋಹನನ್ ವಾಯಕ್ಕಾಡ್ ಪಾಲ್ಗೊಂಡಿದ್ದರು. ಮಹಿಳಾ ಐಕ್ಯವೇದಿ ರಾಜ್ಯ ಕೋಶಾಧಿಕಾರಿ ಓಮನಾ ಮುರಳಿ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಧಾಕರ ಕೊಳ್ಳಿಕ್ಕಾಡ್ ವಂದಿಸಿದರು.