ಪಿಡಿಒ, ವಾರ್ಡ್ ಸದಸ್ಯರ ನೇತೃತ್ವದಲ್ಲಿ ವಾರಾಹಿ ಡ್ಯಾಂಗೆ ಹಲಗೆ ಅಳವಡಿಕೆ

varahi
ವಾರಾಹಿ ನದಿ ಹರಿಯುವ ಅಣೆಕಟ್ಟೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಹಾಗೂ ವಾರ್ಡ್ 9ರ ಸದಸ್ಯ ಶೇಖರ್ ಗಿಳಿಯಾರ್ ನೇತೃತ್ವದಲ್ಲಿ ಶನಿವಾರ ಹಲಗೆ ಅಳವಡಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕೋಟ

ಕೋಟ ಗ್ರಾಪಂ ವತಿಯಿಂದ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ವಾರಾಹಿ ನದಿ ಹರಿಯುವ ಅಣೆಕಟ್ಟೆಗೆ ಪಿಡಿಒ ಸುರೇಶ್ ಬಂಗೇರ ಹಾಗೂ ವಾರ್ಡ್ 9ರ ಸದಸ್ಯ ಶೇಖರ್ ಗಿಳಿಯಾರ್ ನೇತೃತ್ವದಲ್ಲಿ ಶನಿವಾರ ಹಲಗೆ ಅಳವಡಿಸಲಾಯಿತು. ಇದರಿಂದ ಮೂಡುಗಿಳಿಯಾರು ಹಾಗೂ ಗಿಳಿಯಾರು ಸಹಿತ ಸುತ್ತಮುತ್ತಲ ಗ್ರಾಮಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಹಿಂದೆ ಹಲಗೆಗಳನ್ನು ಕಿಡಿಗೇಡಿಗಳು ತೆಗೆದಿದ್ದು, ಮೂಡುಗಿಳಿಯಾರು ಹಾಗೂ ಗಿಳಿಯಾರು ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿತ್ತು. ಆದರೂ ಕ್ರಮ ಕೈಗೊಳ್ಳದಿರುವ ಸ್ಥಳೀಯ ಆಡಳಿತದ ವಿರುದ್ಧ ಸಾರ್ವಜನಿಕರು ಅಸಮಾಧಾನಗೊಂಡಿದ್ದರು.

ಅಕ್ರಮ ಮರಳುಗಾರಿಕೆ ಕಾರಣ


ಪಿಡಿಒ ಸುರೇಶ್ ಈ ಕುರಿತು ಮಾಹಿತಿ ನೀಡಿದ್ದು, ಆವೆ ಮಣ್ಣು ಹಾಗೂ ಅಕ್ರಮ ಮರಳುಗಾರಿಕೆ ನಡೆಸುವವರು ತಮ್ಮ ಕಾರ್ಯಸಾಧನೆಗಾಗಿ ಹಲಗೆ ತೆಗೆದಿದ್ದರು. ಇದರಿಂದ ಗಿಳಿಯಾರು ಪ್ರದೇಶಕ್ಕೆ ನೀರಿನ ಸಮಸ್ಯೆ ಎದುರಾಗಿತ್ತು. ಇದನ್ನು ಕಂಡು ಹಿಡಿಯಲೆಂದು ಸಿಸಿ ಕ್ಯಾಮರಾ ಅಳವಡಿಸಿದ್ದು, ಹಲಗೆ ಹಾಗೂ ಮಣ್ಣು ಹಾಕಿ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂಚಾಯಿತಿ ಕಾರ್ಯದರ್ಶಿ ಶೇಖರ್ ಮರವಂತೆ, ಪಂಚಾಯಿತಿ ಸಿಬ್ಬಂದಿ ಇದ್ದರು.

‘ವಿಜಯವಾಣಿ’ ವರದಿ ಪ್ರಕಟಿಸಿತ್ತು

ಅಕ್ರಮ ಮರಳುಗಾರಿಕೆ ನಡೆಸುವ ನಿಟ್ಟಿನಲ್ಲಿ ವಡ್ಡರ್ಸೆ ಭಾಗದಲ್ಲಿ ಡ್ಯಾಂನಿಂದ ಹಲಗೆಗಳನ್ನು ತೆಗೆಯುತ್ತಿದ್ದುದರಿಂದ ಬೇಸಿಗೆ ಸಂದರ್ಭ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಏ.12ರಂದು ವಿಜಯವಾಣಿ ವಿಸ್ತೃತ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net