ಸಾಲು ಮರದ ತಿಮ್ಮಕ್ಕ ನಿಂಗಣ್ಣ ಪರಿಚಯಿಸುವ ಪ್ಲಾನ್

Salumarada thimmakka
Published on

ಪರಿಸರ ರಕ್ಷಕರಿಗೆ ಅರಣ್ಯ ಇಲಾಖೆ ಗೌರವ

ಸ್ಕಾೃನ್ ಮಾಡಿ ಸ್ಥಳಕ್ಕೆ ದಾರಿ ತೋರಿಸುವ ಯತ್ನ

ಗಂಗಾಧರ್ ಬೈರಾಪಟ್ಟಣ

ರಾಮನಗರ:  ಸಾಲು ಮರದ ತಿಮ್ಮಕ್ಕ , ಪರಿಸರ ಪರಿಚಾರಕ ಸಾಲು ನಿಂಗಣ್ಣ ಇವರ ಪರಿಸರ ಕಾಳಜಿ ಎಲ್ಲರಿಗೂ ಮಾದರಿ. ಇವರ ಸಾಧನೆಯನ್ನು ನೋಡಿರುವವರಿಂತ ಕೇಳಿರುವವರೇ ಹೆಚ್ಚು. ಆದರೆ ಈಗ ಅರಣ್ಯ ಇಲಾಕೆ ಇವರ ಸಾಧನೆಯನ್ನು ಕಣ್ತುಂಬಿಕೊಳ್ಳುವಂತೆ ಮಾಡುವ ಪ್ರಯತ್ನಕ್ಕೆ ಮುನ್ನಡಿ ಇಟ್ಟಿದೆ.

ಹೌದು, ರಾಮನಗರ ಜಿಲ್ಲೆಯ ಈ ಇಬ್ಬರೂ ಪರಿಸರ ಪರಿಚಾರಕರ ಸಾಧನೆಯನ್ನು ಕೇವಲ ಕೇಳಿಯಲ್ಲ, ನೋಡಿ ತಿಳಿಯಲಿ ಎನ್ನುವ ದೃಷ್ಠಿಯಿಂದ ರಾಮನಗರ ಸಾಮಾಜಿಕ ಅರಣ್ಯ ಇಲಾಕೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರು, ಕ್ಯೂರ್ ಕೋಡ್ ಸ್ಕಾೃನ್ ಮಾಡಿದರೆ ಅವರನ್ನು ಈ ಇಬ್ಬರೂ ಸಾಧಕರ ಸಾಧನೆಯನ್ನು ಕಣ್ಣಾರೆ ನೋಡುವ ಅವಕಾಶ ಲಭಿಸಲಿದೆ. ಇದಕ್ಕಾಗಿ ರಾಮನಗರ ಸಾಮಾಜಿಕ ಅರಣ್ಯ ಸಿದ್ದತೆ ಮಾಡಿಕೊಳ್ಳುತ್ತಿದೆ.

ಏನಿದು ಪ್ಲಾನ್?

ಮಾಗಡಿ ತಾಲೂಕಿನ ಕುದೂರು ಹೋಬಳಿಯ ಹುಲಿಕಲ್ ನವರಾದ ತಿಮ್ಮಕ್ಕ, ತಮ್ಮೂರಿನಿಂದ ಕುದೂರುವರೆಗೆ ಸುಮಾರು 400 ಆಲದ ಗಿಡಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿ ಹೆಮ್ಮರವಾಗಿಸಿ, ವೃಕ್ಷ ಮಾತೆ ಎನಿಸಿಕೊಳ್ಳುವ ಜೊತೆಗೆ, ಇಡೀ ವಿಶ್ವಕ್ಕೆ ಮಾದರಿಯಾಗಿ ನಿಂತಿದ್ದಾರೆ.

ಮತ್ತೊಂದೆಡೆ ರಾಮನಗರದ ಅರೇಹಳ್ಳಿಯ ಸಾಲು ಮರದ ನಿಂಗಣ್ಣ, ತಿಮ್ಮಕ್ಕರಷ್ಟು ಬೆಳಕಿಗೆ ಬಾರದಿದ್ದರೂ ಅವರಷ್ಟೇ ಸಾಧನೆ ಮೆರೆಯುವ ಮೂಲಕ ಪರಿಸರ ಪ್ರೇಮಿಗಳಿಗೆ ಮಾದರಿಯಾಗಿ ನಿಂತಿದ್ದಾರೆ. ಇವರು ತಮ್ಮೂರು ಅರೇಹಳ್ಳಿಯಿಂದ ಕೂನು ಮುದ್ದನಹಳ್ಳಿಯವರೆಗೂ ರಸ್ತೆಯ ಎರಡೂ ಬದುಗಳಲ್ಲಿ ಸುಮಾರು 900 ಆಲ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಬೆಳೆಸಿದ್ದಾರೆ.

ಇವರ ಬಗ್ಗೆ ಸಾಧನೆಯನ್ನು ಕಣ್ತುಂಬಿಕೊಳ್ಳಲು ತಿಮ್ಮಕ್ಕನ ಹುಲಿಕಲ್ ಊರಿಗೆ ಹತ್ತಿರದಲ್ಲಿಯೇ ಇರುವ ರಾಷ್ಟ್ರೀಯ ಹೆದ್ದಾರಿ  75 ರಲ್ಲಿ ಹಾಗೂ ಸಾಲು ಮರದ ನಿಂಗಣ್ಣ ಸಾಧನೆಗೆ ಹತ್ತಿರದಲ್ಲಿಯೇ ಇರುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಕೆಲವು ಕಡೆಗಳಲ್ಲಿ ಕ್ಯೂರ್ ಕೋಡ್ ಇರುವ ಬ್ಯಾನರ್‌ಗಳನ್ನು ಹಾಕಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ಕ್ಯೂರ್ ಕೋಡ್ ಸ್ಕಾೃನ್ ಮಾಡುತ್ತಿದರೆ ಇಬ್ಬರೂ ಸಾಧಕರ ನೆಟ್ಟ ಮರಗಳು ಇರುವ ರಸ್ತೆಗೆ ದಾರಿಗೆ ತೋರಲಿದೆ.

ಕಷ್ಟದ ಬದುಕಿನಲ್ಲೇ ನಿಂಗಣ್ಣ

ಕಷ್ಟದ ಜೀವನದ ನಡುವೆಯೂ ಸಾಲು ಮರಗಳನ್ನು ಬೆಳೆಸುವ ಮೂಲಕ ಪರಿಸರ ಕಾಳಜಿಯನ್ನು ಸಾಲುಮರದ ನಿಂಗಣ್ಣ ಮೆರೆದಿದ್ದಾರೆ. ರಾಮನಗರ ತಾಲೂಕಿನ ಅರೆಹಳ್ಳಿ ಗ್ರಾಮದವರಾದ ನಿಂಗಣ್ಣ ಅವಿಧ್ಯಾವಂತರು. ಅದರೆ ಅದೇಕೋ ಇವರಿಗೆ ಮನುಷ್ಯನಿಗಿಂತ ಮರಗಳೇ ವಾಸಿ ಎನ್ನುವ ಭಾವನೆ ಬಂದು ಬಿಟ್ಟಿತು. ಇದಕ್ಕಾಗಿ ನಿಂಗಣ್ಣ ಗಿಡನೆಟ್ಟು ಅವುಗಳ ಪಾಲನೆಗೆ ನಿಂತರು.

ದುಡಿಯಲು ಸ್ವಂತ ಜಮೀನು ಇಲ್ಲದಿದ್ದರೂ, ನೆಟ್ಟ ಗಿಡಗಳ ಪಾಲನೆ ಮಾಡುವ ಜವಾಬ್ದಾರಿಯನ್ನು ಹೊತ್ತ ನಿಂಗಣ್ಣನಿಗೆ, ಪತ್ನಿ ಸಾವಿತ್ರಮ್ಮ ಸಾಥ್ ನೀಡಿದರು.

ತಮ್ಮ ಒಡವೆಗಳನ್ನು ನೀಡಿ, ಗಿಡಗಳಿಗೆ ನೀರು, ಗೊಬ್ಬರ ಹಾಕಲು ನೆರವಾದರು. ಇದರ ಫಲವಾಗಿ ಅರೇಹಳ್ಳಿ - ಕೂನಮುದ್ದನಹಳ್ಳಿ ರಸ್ತೆಯ ಎರಡೂ ಬದುಗಳಲ್ಲಿ ಸುಮಾರು 900 ಮರಗಳು ಬೆಳದು ನಿಂತು ದಾರಿ ಹೋಕರಿಗೆ ನೆರಳು ನೀಡುತ್ತಿವೆ. ಇದರ ಜತೆಗೆ ಅರೇಹಳ್ಳಿಯ ಬಸವನಗುಡಿಯ ಗುಂಡು ತೋಪಿನಲ್ಲಿ, ಮಾವು, ಹಲಸು ಸೇರಿದಂತೆ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟು, ಅವುಗಳನ್ನು ಪಾಲನೆ ಮಾಡಿದ್ದಾರೆ.ಇದರ ಸಲುವಾಗಿಯೇ ರಾಜ್ಯಪಾಲರು ನಿಂಗಣ್ಣನಿಗೆ ಸಾಲುಮರದ ನಿಂಗಣ್ಣ ಎಂದು ಬಿರುದು ನೀಡಿ ಗೌರವಿಸಿದ್ದಾರೆ. ಇತ್ತೀಚಿಗೆ ಇವರಿಗೆ ರಾಜ್ಯ ಪ್ರಶಸ್ತಿಯೂ ಲಭಿಸಿತು. ಆದರೆ, ಬದುಕು ಮಾತ್ರ ಬದಲಾಗಲೇ ಇಲ್ಲ.

==

ವಿಶ್ವದ ಐಕಾನ್ ತಿಮ್ಮಕ್ಕ

ಕುಗ್ರಾಮವೊಂದರಲ್ಲಿ ಇದ್ದ ಅನಕ್ಷರಸ್ಥ ಮಹಿಳೆ ತಿಮ್ಮಕ್ಕ,  ಇಂದು ವಿಶ್ವ ವ್ಯಾಪಿ ಹೆಸರು ಮಾಡಿರುವುದೇ ತಮ್ಮ ಪರಿಸರ ಕಾಳಜಿಯಿಂದ. ಹಲವು ದಶಕಗಳ ಹಿಂದೆ ತಮ್ಮ ನೋವನ್ನು ಮರೆಯಲು ಕೈಗೊಂಡ ಸಣ್ಣ ಕಾರ್ಯವೊಂದು ಇಂದು ವಿಶ್ವದ ಮನೆ ಮಾತಾಗುವಂತೆ ಮಾಡಿದೆ. ಮಾಗಡಿಯ ಹುಲಿಕಲ್ ಗ್ರಾಮದ ಬಿಕ್ಕಲಚಿಕ್ಕಯ್ಯ ಎಂಬುವರ ಧರ್ಮಪತ್ನಿ ತಿಮ್ಮಕ್ಕ, ಪರಿಸರ ಕಾಳಜಿಯಿಂದಾಗಿ ಸಾಲು ಮರದ ತಿಮ್ಮಕ್ಕನಾಗಿ ವಿಶ್ವದ ಐಕಾನ್ ಆಗಿದ್ದಾರೆ.

ಮಕ್ಕಳಿಲ್ಲದ ನೋವನ್ನು ಮರೆಯುವ ಸಲುವಾಗಿ, ಗಿಡಗಳನ್ನು ನೆಟ್ಟು ತಮ್ಮ ಮಕ್ಕಳಂತೆ ಪೋಷಿಸಿ ಬೆಳೆಸಿದವರು ಚಿಕ್ಕಯ್ಯ ಮತ್ತು ತಿಮ್ಮಕ್ಕ ದಂಪತಿ. ಮಾಗಡಿಯ ಹುಲಿಕಲ್‌ನಿಂದ  ಕುದೂರುವರೆಗೂ ಸುಮಾರು 400 ಆಲದ ಗಿಡಗಳನ್ನು ನೆಟ್ಟು ಹೆಮ್ಮರವಾಗಿಸಿದ್ದಾರೆ. ನೀರಿನ ಅಭಾವ ಎದುರಾದಾಗ ಮೂರ‌್ನಾಲ್ಕು ಕಿಲೋ ಮೀಟರ್ ದೂರದಿಂದ ನೀರನ್ನು ಬಿಂದಿಗೆಯಲ್ಲಿ ಹೊತ್ತು ತಂದು, ಗಿಡಗಳನ್ನು ಹೆಮ್ಮರವಾಗಿಸಿದ್ದಾರೆ. ದನ ಕರುಗಳು ಹಾಗೂ ದಾರಿಹೋಕರಿಂದಲೂ ಗಿಡಗಳಿಗೆ ಯಾವುದೇ ಹಾನಿಯಾಗಬಾರದು ಎಂದು ಪ್ರತಿನಿತ್ಯ ಅವುಗಳನ್ನು ವೀಕ್ಷಣೆ ಮಾಡುತಿದ್ದ ದಂಪತಿಯ ಪರಿಶ್ರಮದ ಫಲವಾಗಿ ಹೆಮ್ಮರಗಳು ಈ ದಾರಿಯಲ್ಲಿ ತಂಪು ನೀಡುತ್ತಿವೆ.

ತುಮಕೂರು ರಸ್ತೆಯಲ್ಲಿ ಹುಲಿಕಲ್ ಗ್ರಾಮದಲ್ಲಿರುವ ಸಾಲುಮರದ ತಿಮ್ಮಕ್ಕನವರ ಮನೆಯಿಂದ ಲಕ್ಕೇನಹಳ್ಳಿವರೆಗೂ ಸಾಲು ಮರಗಳು ಕಣ್ಣಿಗೆ ಕಾಣುತ್ತವೆ.

ಸಾಲು ಮರದ ತಿಮ್ಮಕ್ಕ ಮತ್ತು ನಿಂಗಣ್ಣರ ಬಗ್ಗೆ ಹೆಚ್ಚಿನವರು ಕೇಳಿ ತಿಳಿದುಕೊಂಡಿದ್ದಾರೆ. ಆದರೆ ಕಣ್ತುಂಬಿಕೊಂಡವರ ಸಂಖ್ಯೆ ಕಡಿಮೆ. ಈ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಬ್ಯಾನರ್‌ಗಳ ಮೂಲಕ ಕ್ಯೂರ್ ಕೋಡ್‌ಗಳನ್ನು ಹಾಕಿ, ಈ ಇಬ್ಬರೂ ಸಾಧಕರ ನೆಟ್ಟು ಬೆಳೆಸಿದ ಮರಗಳನ್ನು ನೋಡುವ ಮಾಡುವ ಪ್ರಯತ್ನ ಮಾಡಲಾಗುತ್ತಿದ್ದು, ಶೀಘ್ರವೇ ಇದು ಕಾರ್ಯಾರಂಭ ಮಾಡಲಿದೆ.ಪ್ರಸನ್ನ ಕುಮಾರ್,ಡಿಸಿಎಫ್, ಸಾಮಾಜಿಕ ಅರಣ್ಯ ವಿಭಾಗ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net