ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಯೋಜನೆ

1 govt Noukara SAMGHA
ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಮಂಗಳವಾರ ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆಯನ್ನು ಕಾರ್ಯಕ್ರಮದಲ್ಲಿ ಶಿವಪರಶಿವಮೂರ್ತಿ ಮಾತನಾಡಿದರು.
Published on

ತಿ.ನರಸೀಪುರ: ತಾಲೂಕು ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರು ಸಭೆ, ಸಮಾರಂಭಗಳನ್ನು ನಡೆಸಲು ಪಟ್ಟಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಸರ್ಕಾರಿ ನೌಕರರ ಭವನವನ್ನು ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಮಂಗಳವಾರ ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಈಗಿನ ಕಟ್ಟದ ಕಿರಿದಾಗಿದ್ದು, ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೂರಲು ಸ್ಥಳಾವಕಾಶದ ಸಮಸ್ಯೆಯಾಗುತ್ತಿದೆ. ತಾಲೂಕು ಕೇಂದ್ರವಾದ ನರಸೀಪುರದಲ್ಲಿ ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ನೌಕರರ ಭವನವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿರುವುದಕ್ಕೆ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ ನಿವೃತ್ತ ನೌಕರರು ಕೂಡ ಸಂಘಟಿತರಾಗಿ ಕ್ರಿಯಾಶೀಲತೆಯಿಂದ ನಿವೃತ್ತರ ಹಿತವನ್ನು ಕಾಪಾಡಲು ಕಾರ್ಯಪ್ರವೃತರಾಗಿರುವುದರಿಂದ ಸದಸ್ಯತ್ವ ನೋಂದಣಿಯ ಜತೆಗೆ ಸಂಘಟನೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ನಿವೃತ್ತರ ಸಂಘಕ್ಕೆ ಸ್ವಂತ ಕಟ್ಟಡವನ್ನು ಹೊಂದಲು ಸರ್ಕಾರಿ ನೌಕರರ ಸಂಘದ ಪಕ್ಕದಲ್ಲಿಯೇ ನಿವೇಶನ ನೀಡಲು ಈಗಲು ನಾವು ಬದ್ಧರಾಗಿದ್ದೇವೆ. ಬಾಕಿ ಇರುವ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಂಡು ಸಂಘದ ಹೆಸರಿಗೆ ನಿವೇಶನವನ್ನು ನೋಂದಾಯಿಸಿಕೊಳ್ಳಬೇಕೆಂದು ಎಂ.ವಿ.ಶಿವಶಂಕರಮೂರ್ತಿ ತಿಳಿಸಿದರು.

ಸಂಘದ ಕಾರ್ಯದರ್ಶಿ ಎಸ್.ವೆಂಕಟರಮಣಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿ, ನಿವೃತ್ತರ ಬೇಡಿಕೆ ಹೈಕೋರ್ಟ್‌ನಲ್ಲಿ ಈಡೇರಿದ್ದರಿಂದ ಪ್ರತಿ ವರ್ಷವೂ ನ.17ರಂದು ನಿವೃತ್ತ ನೌಕರರ ದಿನವನ್ನು ಆಚರಿಸಲಾಗುತ್ತಿದೆ. ಹಲವು ದಶಕಗಳ ಹಿಂದೆ ಐವರು ಹಿರಿಯ ನಿವೃತ್ತರು ಒಂದೆಡೆ ಕುಳಿತು ಆರಂಭಿಸಿದ ಸಂಘದಲ್ಲಿ 525 ಸದಸ್ಯರು ನೋಂದಣಿಯಾಗಿದ್ದಾರೆ. ಮಾಸಿಕವಾಗಿ ಸಭೆ, ಕಾಲಕಾಲಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಬಿಪಿ ಹಾಗೂ ರಕ್ತದೊತ್ತಡ ಪರೀಕ್ಷೆಗಳನ್ನು ಮಾಡಿಸುತ್ತಿದ್ದೇವೆ. ಬೆಟ್ಟಯ್ಯ ಅಧ್ಯಕ್ಷರಾಗಿದ್ದಾಗ ಸಾವಿಗೀಡಾದ ನಿವೃತ್ತರಿಗೆ ನೀಡುವ ಶವಸಂಸ್ಕಾರದ ನೆರವನ್ನು ಈಗಲೂ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಎಚ್‌ಡಿಎಫ್‌ಸಿ ಬ್ಯಾಂಕಿನ ವ್ಯವಸ್ಥಾಪಕ ಲಕ್ಷ್ಮಣ್ ಸಿಂಗ್ ಮಾತನಾಡಿ, ಆನ್‌ಲೈನ್ ವಂಚಕರ ಜಾಲ ವೃದ್ಧರಾಗಿರುವ ನಿವೃತ್ತ ನೌಕರರ ಟಾರ್ಗೆಟ್ ಮಾಡಿ ವಂಚಿಸುತ್ತಿರುವುದರಿಂದ ಮೈಸೂರು ಜಿಲ್ಲೆಯಲ್ಲಿಯೇ ಇದುವರೆಗೂ 11 ಸಾವಿರ ಕೋಟಿ ರೂ.ಗಳನ್ನು ಲಕ್ಷಾಂತರ ಮಂದಿ ಕಳೆದುಕೊಂಡಿದ್ದಾರೆ. ಈಗ ಬ್ಯಾಂಕಿಂಗ್ ವ್ಯವಹಾರ ಅಂತರ್ಜಾಲದಲ್ಲಿ ಆನ್‌ಲೈನ್ ಮೂಲಕವೂ ನಡೆಯುವುದರಿಂದ ವಂಚಕರ ಬಗ್ಗೆ ನಿವೃತ್ತ ನೌಕರರು ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.

ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಸಂತೋಷ್ ಹಾಗೂ ಆರ್ಥಿಕ ಸಾಕ್ಷರತಾ ಸಲಹೆಗಾರ ಎಸ್.ವಿ.ರಮೇಶ್ ರಾವ್ ಮಾತನಾಡಿದರು. ಸಂಘದ ಅಧ್ಯಕ್ಷ ಎಂ.ಮಹದೇವಯ್ಯ, ಖಜಾಂಚಿ ಜೆ.ಸಿದ್ದೇಗೌಡ, ಸಹ ಕಾರ್ಯದರ್ಶಿ ಎಂ.ಗೋವಿಂದರಾಜು, ಸಂಘಟನಾ ಕಾರ್ಯದರ್ಶಿ ಕೆ. ವೀರಯ್ಯ, ಲೆಕ್ಕಪರಿಶೋಧಕ ಕೆ.ಕೆಂಚಪ್ಪ, ನಿವೃತ್ತ ಸಹಾಯಕ ನಿರ್ದೇಶಕ ಆರ್.ಲಿಂಗರಾಜು, ನಿರ್ದೇಶಕರಾದ ಟಿ.ಕೆ.ಬಸವರಾಜು, ಬೋರಯ್ಯ, ಸಿ.ಲಿಂಗಯ್ಯ, ಎಂ.ಜವನಯ್ಯ, ಕೆ.ಕಲ್ಲಯ್ಯ, ವಿ.ಮುತ್ತುರಾಜ್, ತಮ್ಮಯ್ಯ ಶೆಟ್ಟಿ, ಡಿ. ರಂಗದಾಸಯ್ಯ ಹಾಗೂ ಸದಸ್ಯರಾದ ನಿವೃತ್ತ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net