ಮುಂದಿನ ವರ್ಷ ಪೌರಕಾರ್ಮಿಕರಿಗೆ ನಿವೇಶನ!

FotoJet (1)
Published on

 ಶಾಸಕ ಎಚ್.ಸಿ.ಬಾಲಕೃಷ್ಣ ಭರವಸೆ |  ಒಣ ಕಸ, ಹಸಿ ಕಸ ವಿಂಗಡಿಸಿ ಕೊಡಿ

 ಬಿಡದಿ : ಮುಂದಿನ ವರ್ಷ ಪೌರಕಾರ್ಮಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಭರವಸೆ ನೀಡಿದರು.

ಬಿಡದಿಯ ಈಗಲ್ ಟನ್ ರೆಸಾರ್ಟ್‌ನಲ್ಲಿ ರಾಜ್ಯ ಪೌರಸೇವಾ ನೌಕರರ ಸಂಘ, ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ ಮಹಾ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕೆಲ ಪೌರ ಕಾರ್ಮಿಕರಿಗೆ ನಿವೇಶನಗಳಿಲ್ಲ. ಈ ಬಗ್ಗೆ ಪುರಸಭಾ ಆಡಳಿತ ಮಂಡಳಿ ಕ್ರಮ ವಹಿಸಬೇಕು. ಪುರಸಭಾ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಜಾಗವನ್ನು ಗುರುತಿಸಿ ಅನುಮೋದನೆ ಪಡೆಯಿರಿ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಮುಂದಿನ ವರ್ಷದ ಕಾರ್ಮಿಕರ ದಿನಾಚರಣೆ ಅಷ್ಟರಲ್ಲಿ ನಿವೇಶನಗಳನ್ನು ಹಂಚಿಕೆ ಮಾಡೋಣ ಎಂದು ಪೌರ ಕಾರ್ಮಿಕರಿಗೆ ಭರವಸೆ ನೀಡಿದರು. ಅಲ್ಲದೆ ಕಾರ್ಮಿಕರ ಮಕ್ಕಳ ಮದುವೆಗೆ ಪುರಸಭೆಯಿಂದ ಒಂದು ಲಕ್ಷ ರೂ. ನೀಡುವ ಕೆಲಸವಾಗಲಿ ಎಂದು ತಿಳಿಸಿದರು.

ಕಾರ್ಮಿಕರ ಸಮಸ್ಯೆಗಳನ್ನು ಜನ ಪ್ರತಿನಿಧಿಗಳು ಬಗೆಹರಿಸುವ ಕೆಲಸ ಮಾಡಬೇಕು. ಪುರಸಭಾ ಸದಸ್ಯರು ಕಾರ್ಮಿಕರ ಜತೆಗೆ ಬೆರೆಯಬೇಕು, ಆಗಷ್ಟೆ ಪಟ್ಟಣ ಅಂದವಾಗಿರಲಿದೆ. ಪಟ್ಟಣದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿಲ್ಲ. ಒಣ ಕಸ, ಹಸಿ ಕಸ ವಿಂಗಡಿಸಿ ಕೊಡುತ್ತಿಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಬೇಕು. ಈ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ತಾಕೀತು ಮಾಡಿದರು.

ಪುರಸಭಾ ಅಧ್ಯಕ್ಷ ಎಂ.ಎನ್. ಹರಿಪ್ರಸಾದ್ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಪೌರ ಕಾರ್ಮಿಕರೆಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದರಿಂದ ಅವರ ಆರೋಗ್ಯದ ಕಾಳಜಿ ಕಾಪಾಡಲಾಗುತ್ತಿದೆ.

ಕಾರ್ಮಿಕರನ್ನು ಕೀಳಾಗಿ ನೋಡದೆ ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂದರು.

ಪುರಸಭಾ ಮುಖ್ಯಾಧಿಕಾರಿ ಕೆ.ಜಿ.ರಮೇಶ್ ಮಾತನಾಡಿ, ಪುರಸಭೆಯಲ್ಲಿ 36 ಮಂದಿ ಖಾಯಂ ಪೌರ ಕಾರ್ಮಿಕರಿದ್ದಾರೆ, 14 ಮಂದಿ ನೇರಪಾವತಿ ಕಾರ್ಮಿಕರು, ಹೊರ ಗುತ್ತಿಗೆ ಅಧಾರದ ಮೂಲಕ ಚಾಲಕರು, ಸಹಾಯಕರು, ಲೋಡರ್‌ಗಳು ಸೇರಿ 30 ಮಂದಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. 23 ಗಾರ್ಡ್‌ಗಳಿವೆ. ಜನಸಂಖ್ಯೆ ಆಧಾರದಲ್ಲಿ ನೋಡಿದರೆ ದುಪ್ಪಟ್ಟು ಕಾರ್ಮಿಕರು ಬೇಕಾಗುತ್ತಾರೆ. ಈಗೀರುವ ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತೆ ಮಾಡಲಾಗುತ್ತಿದೆ. ಅವರಿಗೆ ಸಿಗಬೇಕಾದ ಎಲ್ಲ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಸದಸ್ಯರಾದ ಉಮೇಶ್, ಶ್ರೀನಿವಾಸ್, ನವೀನ್ ಕುಮಾರ್, ಎನ್. ಕುಮಾರ್, ಮನು ಸಿ.ಆರ್, ಲಲಿತಾ, ಹೊಂಬಯ್ಯ, ನಾಗರಾಜು, ಬಿಂದ್ಯಾ, ಮಹೀಮಾ ಕುಮಾರ್, ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಛಲಪತಿ, ಪುರಸಭಾ ಇಂಜಿನಿಯರ್ ಶ್ಯಾಮ್, ಶಿಲ್ಪಾ, ನಟರಾಜ್, ಮುಖಂಡರಾದ ಬೆಟ್ಟಸ್ವಾಮಿ, ಅಬ್ಬನಕುಪ್ಪೆ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net