ಒಣ ಮರಗಳ ತೆರವಿಗೆ ಮೀನಮೇಷ!

Ona Mara Samsye
Published on

* ಶ್ಯಾನುಭೋಗನಹಳ್ಳಿ, ಚನ್ನಮಾನಹಳ್ಳಿ ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ

* ಕಂಡರೂ ಕಾಣದಂತಿರುವ ಅರಣ್ಯ ಇಲಾಖೆ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಒಣಗಿರುವ ಮರಗಳನ್ನು ತೆರವು ಮಾಡುವಲ್ಲಿ ಅರಣ್ಯ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆಗಳು ಮೀನಮೇಷ ಎಣಿಸುತ್ತಿವೆ.

ರಾಜ್ಯ ಹೆದ್ದಾರಿ, ಜಿಲ್ಲಾ ಪ್ರಮುಖ ರಸ್ತೆ, ಗ್ರಾಮೀಣ ಭಾಗದ ಸಂಪರ್ಕ ರಸ್ತೆ ಅಕ್ಕಪಕ್ಕದಲ್ಲಿ ಮರಗಳು ಒಣಗಿ ನಿಂತಿದ್ದು, ಮಳೆ ಗಾಳಿಗೆ ಮರಗಳು ರಸ್ತೆಗೆ ಉರುಳಿ ಬೀಳುವ ಕಾರಣ ರಸ್ತೆಯಲ್ಲಿ ಓಡಾಟ ನಡೆಸುವ ಜನರಿಗೆ ಸಮಸ್ಯೆ ಉಂಟಾಗುತ್ತದೆ. ಜತೆಗೆ ಅಪಾಯ ಎದುರಿಸಬೇಕಾಗುತ್ತದೆ.

ಪ್ರಸ್ತುತ ಮಳೆಗಾಲ ಸಮೀಪಿಸುತ್ತಿದ್ದು, ಮಳೆ, ಗಾಳಿ ಬಂದ ಸಂದರ್ಭದಲ್ಲಿ ಹಸಿರಾದ ಮರಗಳೇ ಕೆಲವೊಮ್ಮೆ ನೆಲಕ್ಕುರುಳುತ್ತವೆ. ಇಂತಹ ಸಂದರ್ಭದಲ್ಲಿ ಒಣಗಿದ ಮರಗಳು ಬಹುಬೇಗನೆ ಮುರಿದು ಬೀಳುತ್ತವೆ. ಆ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನ, ವಾಹನ ಸವಾರರು ಸಮಸ್ಯೆಗೆ ಸಿಲುಕುತ್ತಾರೆ. ಈ ಕಾರಣದಿಂದ ಒಣ ಮರ ತೆರವು ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದಲೂ ಒಣಮರ ತೆರವು ಮಾಡಿಲ್ಲ. ರಾಮನಗರ ಕನಕಪುರ ರಸ್ತೆ, ಬನ್ನಿಕುಪ್ಪೆ ರಸ್ತೆ, ರಾಮನಗರ ಹುಣಸನಹಳ್ಳಿ ರಸ್ತೆ, ಜಾಲಮಂಗಲ ರಸ್ತೆ, ಮಾಗಡಿ ರಸ್ತೆ, ನಗರ ಪ್ರದೇಶದ ಕೆಲವು ಕಡೆ ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳಲ್ಲಿ ಒಣ ಮರಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಚನ್ನಮಾನಹಳ್ಳಿಯಲ್ಲಿ ಜನ ವಸತಿ ಪ್ರದೇಶದಲ್ಲೇ ಒಂದು ವರ್ಷದಿಂದಲೂ ಮರ ಒಣಗಿದ್ದು, ಅಪಾಯ ಕಣ್ಣಿಗೆ ಕಾಣುತ್ತಿದೆ.

ಈ ಹಿಂದೆ ಕೆಲವು ಸಂದರ್ಭದಲ್ಲಿ ಒಣಗಿದ ಮರಗಳು ಬಿದ್ದು, ಸಾರ್ವಜನಿಕರಿಗೆ ವಾಹನ ಸವಾರರಿಗೆ ತೊಂದರೆ ಉಂಟಾದ ನಿದರ್ಶನಗಳು ಸಾಕಷ್ಟು ಕಾಣುತ್ತವೆ. ಹೀಗಿದ್ದರೂ ರಸ್ತೆ ರಸ್ತೆಯಲ್ಲಿ ಒಣಗಿದ ಮರ ಇಂದೋ ನಾಳೆಯೋ ಬೀಳುವ ಸ್ಥಿತಿ ಕಂಡರೂ ಕಾಣದಂತೆ ಸಂಬಂಧಪಟ್ಟ ಇಲಾಖೆಗಳು ಮೌನವಹಿಸಿರುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಕೂಡಲೇ ಒಣ ಮರ ತೆರವು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೀನಮೇಷ ಏಕೆ?

ರಸ್ತೆ ವಿಸ್ತರಣೆ ಸೇರಿ ಯಾವುದೇ ಸಮಸ್ಯೆ ಕಾಣದಿದ್ದರೂ ಚೆನ್ನಾಗಿರುವ ಹಸಿರು ಮರಕ್ಕೆ ಕೊಡಲಿ ಪೆಟ್ಟು ನೀಡಲು ಮುಂದಾಗುವ ನಗರಸಭೆ, ಗ್ರಾಪಂ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆಗಳು ಅಪಾಯತಂದೊಡ್ಡುವ ಒಣಗಿದ ಮರತೆರವು ಮಾಡಲು ಏಕೆ ಮೀನಮೇಷ ಎಣಿಸುತ್ತಿವೆ ಎಂಬುದು ಸಾರ್ವಜನಿಕರ ಪ್ರಶ್ನೆ.

ಸ್ಥಳಿಯ ಸಂಸ್ಥೆ ಮುತುವರ್ಜಿವಹಿಸಲಿ

ಒಣಗಿದ ಮರ ಕಂಡ ಕೂಡಲೇ ಸಂಬಂಧಪಟ್ಟ ನಗರಸಭೆ, ಗ್ರಾಪಂ, ಲೋಕೋಪಯೋಗಿ ಇಲಾಖೆಗಳು ಮರ ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಆಗ ಅರಣ್ಯ ಇಲಾಖೆ ನಿಯಮಾನುಸಾರ ಕ್ರಮವಹಿಸಿ ಮರ ತೆರವು ಮಾಡುವ ಪ್ರಕ್ರಿಯೆ ನಡೆಸುತ್ತದೆ. ಆದರೆ, ಸ್ಥಳಿಯ ಸಂಸ್ಥೆಗಳು ಮರ ಒಣಗಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವ ಕೆಲಸ ಮಾಡುವುದಿಲ್ಲ.

ಭಾಗವಹಿಸದ ಹರಾಜುದಾರರು

ಅರಣ್ಯ ಇಲಾಖೆ ಮರ ತೆರವು ಪ್ರಕ್ರಿಯೆಯನ್ನು ಹರಾಜು ಮೂಲಕ ನಡೆಸಬೇಕು. ಆದರೆ, ಒಣ ಮರ ಹರಾಜು ಪ್ರಕ್ರಿಯೆಯಲ್ಲಿ ಯಾರೂ ಭಾಗವಹಿಸುವುದಿಲ್ಲ. ಈ ಕಾರಣದಿಂದ ಅರಣ್ಯ ಇಲಾಖೆ ಮರತೆರವು ಕಾರ್ಯಾಚರಣೆಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇಲೆ ತೆರವು ಕಾರ್ಯ ನಡೆದರಷ್ಟೆ ಒಣ ಮರ ತೆರವು ಸಾಧ್ಯ. ಇಲ್ಲದಿದ್ದರೆ ಒಣಮರ ಹೇಗಿದೆಯೋ ಹಾಗೇ ನಿಂತಿರುತ್ತದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಎಲ್ಲೆಲ್ಲಿ ಮರಗಳು ಒಣಗಿವೆ ಎಂಬುದನ್ನು ಪರಿಶೀಲನೆ ನಡೆಸಿ ಮರಗಳನ್ನು ಗುರುತಿಸಿ ಅಪಾಯ ತರುವ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತಿದೆ. ಜತೆಗೆ ಸಾರ್ವಜನಿಕರು ಮರ ಒಣಗಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದರೆ ಪರಿಶೀಲನೆ ನಡೆಸಿ ಇಲಾಖೆ ಮರ ತೆರವು ಮಾಡಲಿದೆ. ಮಹಮ್ಮದ್​ ಮನ್ಸೂರ್​ವಲಯ ಅರಣ್ಯಾಧಿಕಾರಿ, ರಾಮನಗರರಸ್ತೆ ಪಕ್ಕದಲ್ಲಿ ಒಣಗಿ ನಿಂತ ಮರಗಳು ಇಂದೋ ನಾಳೆಯೋ ಎಂಬಂತೆ ಅಪಾಯಕಾರಿಯಾಗಿವೆ. ಮಳೆಗಾಳಿ ಸಮಯದಲ್ಲಿ ನೆಲಕ್ಕುರುಳಿ ವಾಹನ ಸವಾರರಿಗೆ ಅಪಾಯ ತರುತ್ತವೆ. ಕೆಲವು ರಸ್ತೆಗಳಲ್ಲಿ ಕಳೆದ ಎರಡು ಮೂರು ವರ್ಷಗಳಿಂದಲೂ ಒಣ ಮರ ತೆರವು ಆಗಿಲ್ಲ. ಸಂಬಂಧಪಟ್ಟ ಗ್ರಾಪಂ, ನಗರಸಭೆ ಲೋಕೋಪಯೋಗಿ ಇಲಾಖೆಗಳು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ ಪ್ರಯೋಜನಕ್ಕೆ ಬಾರದ ಒಣ ಮರ ತೆರವು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.  ರಾಮಕೃಷ್ಣಯ್ಯಗ್ರಾಪಂ ಮಾಜಿ ಅಧ್ಯಕ್ಷ, ಸುಗ್ಗನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net