ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ಒಂದರ ನಂತರ ಒಂದರಂತೆ ಚುನಾವಣೆ ಕಳೆಯುತ್ತಿವೆ. ಆದರೆ, ಸ್ಥಳಿಯ ಬಿಜೆಪಿ ಟಕಗಳಿಗೆ ಸಾರಥಿಗಳ ಬದಲಾವಣೆ ಆಗದಿರುವುದು ಪಕ್ಷದ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.
ಬಿಜೆಪಿಯಲ್ಲಿ 3 ವರ್ಷಕ್ಕೊಮ್ಮೆ ಪದಾಧಿಕಾರಿ ಗಳನ್ನು ಬದಲಾಯಿಸಲಾಗುತ್ತದೆ. ಆದರೆ, 6 ವರ್ಷ ಕಳೆದರೂ ಸ್ಥಳಿಯ ತಾಲೂಕು, ನಗರ ಘಟಕದ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆದಿಲ್ಲ. ಹೊಸಬರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ನಮಗೂ ಅವಕಾಶ ದೊರೆಯಬಹುದು ಎಂದು ಪಕ್ಷದ ಮುಖಂಡರು, ಕಾರ್ಯಕರ್ತರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ನೇಮಕಾತಿಗೆ
ಮೀನಮೇಷ ಎಣಿಸುತ್ತಿರುವುದು ಪಕ್ಷದ ಸಂಘಟನೆ ಮೇಲೆ ಹೊಡೆತ ಬೀಳುತ್ತಿದೆ.
ಮುಂದೆ ಜಿಪಂ, ತಾಪಂ, ಗ್ರಾಪಂ, ನಗರಸಭೆ ಸೇರಿ ಸ್ಥಳಿಯ ಸಂಸ್ಥೆಗಳ ಚುನಾವಣೆಗಳು ಸಾಲು ಸಾಲಾಗಿ ಬರಲಿವೆ. ಮತ ಬ್ಯಾಂಕ್ ಗಟ್ಟಿಮಾಡಿಕೊಳ್ಳಬೇಕಾದರೆ ಚುನಾವಣೆ ಪ್ರಮುಖ ಪಾತ್ರ ವಹಿಸಲಿವೆ. ಅನೇಕ ಸವಾಲು ಎದುರಿಸಿ ಸಂಘಟನೆ ಪಕ್ಷ ಸಂಘಟನೆ ಮಾಡಬೇಕಿದೆ.
ಆದ್ದರಿಂದ ಈಗಲಾದರೂ ನೂತನ ಪದಾಧಿಕಾರಿಗಳ ನೇಮಕ ನಡೆಯುವುದೇ ಎಂದು ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ. ಪಕ್ಷದಲ್ಲಿ ಸಂಘಟನೆ ದೃಷ್ಟಿಯಿಂದ ಸಮರ್ಥವಾಗಿ ನಾಯಕತ್ವವವನ್ನು ನಿಬಾಯಿಸಬಲ್ಲ ಸಂಘಟನಾ ಚಾತುರ್ಯವುಳ್ಳವರನ್ನು ಸಾರಥಿಗಳನ್ನು ನೇಮಿಸಬೇಕು ಎಂಬುದು ಮುಖಂಡರು, ಕಾರ್ಯಕರ್ತರ ಆಶಯವಾಗಿದೆ.
ಸಂಘಟನೆಯ ಸವಾಲು: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸಿಗರು, ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ಕೆಲಸ ಮಾಡಿದರು. ಆದಾಗ್ಯೂ ಗೌರಿಬಿದನೂರು ವಿಧಾನಸಭೆ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ಗೆ ಹೆಚ್ಚಿನ ಮತಗಳು ಬಂದಿದ್ದವು. ಆದರೆ ಲೋಕಸಭೆ ಚುನಾವಣೆಗೂ ಇತರ ಚುನಾವಣೆಗಳಿಗೂ ಮತದಾರರ ತೀಮಾರ್ನ ಬೇರೆಯೇ ಆಗಿರುತ್ತದೆ.
ಕೂಡಿ ಬಾರದ ಮುಹೂರ್ತ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದೆಲ್ಲೆಡೆ ತಾಲೂಕು ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ ಪದಾಧಿಕಾರಿಗಳನ್ನು ಬದಲಿಸಿದರೆ ಅಪಸ್ವರಗಳು ಬರಬಹುದು. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿ ಹಾಲಿ ಪದಾಧಿಕಾರಿಗಳನ್ನೇ ಮುಂದುವರಿಸಲಾಯಿತು. ನಂತರ ಲೋಕಸಭೆ ಚುನಾವಣೆಗೂ ಬದಲಾವಣೆ ಲಕ್ಷಣ ಕಂಡುಬರಲಿಲ್ಲ. ಪಕ್ಷದ ಜಿಲ್ಲಾಧ್ಯಕ್ಷರ ನೇಮಕದ ಬಳಿಕ ನಡೆಯಬಹುದು ಎಂದು ಕಾರ್ಯಕರ್ತರು ನಿರೀಕ್ಷೆಯಲ್ಲಿದ್ದರು. ಸೀಕಲ್ ರಾಮಚಂದ್ರೇಗೌಡ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡು 5 ತಿಂಗಳು ಕಳೆಯುತ್ತಿವೆ. ಆದರೆ, ತಾಲೂಕು ನಗರ ಘಟಕಗಳ ಪದಾಧಿಕಾರಿಗಳ ನೇಮಕಕ್ಕೆ ಮುಹೂರ್ತ ಕೂಡಿ ಬಂದಿಲ್ಲ. ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ರಮೇಶ್, ನಗರ ಘಟಕದ ಅಧ್ಯಕ್ಷರಾಗಿ ಮಾರ್ಕೆಟ್ ಮೋಹನ್ ಮುಂದುವರಿದಿದ್ದಾರೆ.
ಪಕ್ಷದ ರಾಜ್ಯ ಸಮಿತಿಯಿಂದ ತಾಲೂಕಿನ ವಿವಿಧ ಮೋರ್ಚ ಪದಾಧಿಕಾರಿಗಳ ಆಯ್ಕೆಗೆ ಸೂಚನೆ ಬಂದಿದ್ದು, ಪ್ರಕ್ರಿಯೆ ಪ್ರಾರಂಭವಾಗಿದೆ. ಡಿಸೆಂಬರ್ ಮಾಹೆಯ ಒಳಿಗೆ ಜಿಲ್ಲೆಯ ಎಲ್ಲ ತಾಲೂಕುವಾರು ವಿವಿಧ ಮೋರ್ಚಾಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಪಕ್ಷದ ಸಂಟನೆಗೆ ಒತ್ತು ನೀಡುವುದಾಗಿ ತಿಳಿಸಿದರು.
|ಸಿಕಲ್ ರಾಮಚಂದ್ರಗೌಡ ಬಿಜೆಪಿ ಜಿಲ್ಲಾಧ್ಯಕ್ಷ