

ಬೆಂಗಳೂರು: ಜಾಗತಿಕವಾಗಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಸುಧಾರೆಡ್ಡಿ ಫೌಂಡೇಶನ್ ಮತ್ತು ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ (ಎಂಇಐಎಲ್) ಫೌಂಡೇಶನ್ ಸೆ. 29ರಂದು ಬೃಹತ್ ‘ಪಿಂಕ್ ಪವರ್ ರನ್’ ಏರ್ಪಡಿಸಿದ್ದು, ವಿಶ್ವದಾಖಲೆ ನಿರ್ಮಿಸುವ ಗುರಿ ಹೊಂದಿದೆ.
ಈ ಕುರಿತು ಸುಧಾರೆಡ್ಡಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಸುಧಾರೆಡ್ಡಿ ಮತ್ತು ಓಲಂಪಿಕ್ಸ್ ಪದಕ ವಿಜೇತ ಕ್ರೀಡಾಪಟು ಪಿ.ವಿ. ಸಿಂಧು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.
ಪಿಂಕ್ ಪವರ್ ರನ್ ಮೂರು ವಿಭಿನ್ನ ವಿಭಾಗಗಳನ್ನು ಒಳಗೊಂಡಿದ್ದು, ವಿವಿಧ ವಯಸ್ಸಿನವರಿಗಾಗಿ 3 ಕಿಮೀ, 5 ಕಿ.ಮೀ ಮತ್ತು 10 ಕಿ.ಮೀ ಓಟ ನಡೆಯಲಿದೆ. ಓಟದಲ್ಲಿ ಪಾಲ್ಗೊಳ್ಳುವವರಿಗೆ ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಾಗುವುದು. ಈ ಬೃಹತ್ ಓಟದ ಮೂಲಕ ಗುಲಾಬಿ ಪಕ್ಷಿ ಸೃಷ್ಟಿಸಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಈ ಪ್ರಯತ್ನದಲ್ಲಿ ಹಿರಿಯ ಕಿರಿಯರೆನ್ನದೆ ಎಲ್ಲ ವಯೋಮಾನದವರು ಪಾಲ್ಗೊಂಡು ಗುಲಾಬಿ ಬಣ್ಣದಲ್ಲಿ ಅಲಂಕರಿಸಲಾದ ಪಕ್ಷಿಯ ಬೃಹತ್ ಮಾನವ ಚಿತ್ರವನ್ನು ರಚಿಸುವ ಮೂಲಕ ಇಡೀ ಜಗತ್ತಿಗೆ ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಐಕ್ಯತೆ ಸಂದೇಶ ಸಾರಬೇಕು ಎಂದರು.
ಯುನಿಸೆಫ್‌ನ ಅಂತಾರಾಷ್ಟ್ರೀಯ ಮಂಡಳಿಯ ಸದಸ್ಯೆ ಆಗಿರುವ ಸುಧಾರೆಡ್ಡಿ, ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಆರಂಭಿಕ ಪತ್ತೆ ಮತ್ತು ನಿಯಮಿತ ತಪಾಸಣೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಇದರ ಬಗ್ಗೆ ಜನರಲ್ಲಿ ಜಾಗೃತಿಯ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಿಂಕ್ ಪವರ್ ರನ್ ಕೇವಲ ಒಂದು ಓಟವಲ್ಲ, ಇದು ಬದುಕುಳಿದವರಿಗೆ ತಮ್ಮ ಸ್ಪೂರ್ತಿದಾಯಕ ಕ್ಷಣಗಳನ್ನು ಹಂಚಿಕೊಳ್ಳಲು, ಅರಿವು ಮೂಡಿಸಲು ವೇದಿಕೆಯಾಗಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸ್ತ್ರೀ ರೋಗ ತಜ್ಞೆ ಡಾ. ಸುಧಾಸಿನ್ಹ ಹಾಗೂ ಸ್ತನ ಕ್ಯಾನ್ಸರ್‌ನಿಂದ ಮುಕ್ತರಾಗಿರುವ ಹಲವು ಮಹಿಳೆಯು ಪಾಲ್ಗೊಂಡಿದ್ದರು.
ಪಿಂಕ್ ಪವರ್ ರನ್‌ನಲ್ಲಿ ಭಾಗವಹಿಸಲು ನೋಂದಾಯಿಸಲು ಹಾಗೂ ಮಾಹಿತಿಗಾಗಿ www.pinkpowerrun.in ವೆಬ್ ಸೈಟ್‌ಗೆ ಭೇಟಿ ನೀಡಬಹುದು.