ರಾಜ್ಯದ 35 ಕಾರ್ಮಿಕರ ಮಕ್ಕಳಿಗೆ ಪೈಲೆಟ್ ತರಬೇತಿ; ಶಿವರಾಮ ಹೆಬ್ಬಾರ್ ಹೇಳಿಕೆ

17-RNR-06
Published on

ರಾಣೆಬೆನ್ನೂರ: ಅರ್ಹರಲ್ಲದವರು ಕಾರ್ಮಿಕರ ಕಾರ್ಡ್ ಪಡೆದ ಪ್ರಕರಣಗಳು ಕಂಡುಬಂದಲ್ಲಿ ಕಾರ್ಮಿಕರ ಸಂಘಟನೆಗಳು ಇಲಾಖೆಗೆ ಮಾಹಿತಿ ನೀಡಬೇಕು. ಈಗಾಗಲೇ ಅನರ್ಹರನ್ನು ಪತ್ತೆಹಚ್ಚಲು ತಂಡ ರಚಿಸಲಾಗಿದೆ. ಇಂತಹ ಪ್ರಕರಣಗಳು ಪತ್ತೆಯಾದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ಹೇಳಿದರು.

ಇಲ್ಲಿಯ ಕಮಲಾ ನಗರದಲ್ಲಿ ಸೋಮವಾರ ರಾಜ್ಯ ವಿಮಾ ಚಿಕಿತ್ಸಾಲಯ (ಇ.ಎಸ್.ಐ.) ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 35 ಕಾರ್ಮಿಕರ ಮಕ್ಕಳಿಗೆ 35 ಲಕ್ಷ ರೂ. ವೆಚ್ಚದಲ್ಲಿ ಪೈಲೆಟ್ ತರಬೇತಿ ನೀಡಲಾಗುವುದು. ಇಡಿ ದೇಶದಲ್ಲೆ ರಾಜ್ಯದ ಕಾರ್ಮಿಕ ಇಲಾಖೆ ಕ್ರಾಂತಿಕಾರಿ ಬದಲಾವಣೆ ತಂದಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ.

ಕಳೆದ ಎರಡು ವರ್ಷದಲ್ಲಿ ರಾಜ್ಯದ ಕಾರ್ಮಿಕರ ಮಕ್ಕಳಿಗೆ 845 ಕೋಟಿ ರೂ. ವಿದ್ಯಾರ್ಥಿವೇತನ ಪಾವತಿಸಲಾಗಿದೆ. ದೇಶದ ಇತಿಹಾಸದಲ್ಲೆ ಮೊದಲ ಬಾರಿಗೆ 500 ಕಾರ್ಮಿಕರ ಮಕ್ಕಳನ್ನು ಕೆ.ಎ.ಎಸ್. ಹಾಗೂ 250 ಕಾರ್ಮಿಕರ ಮಕ್ಕಳನ್ನು ಐ.ಎ.ಎಸ್. ತರಬೇತಿಗೆ ನಿಯೋಜಿಸಲಾಗಿದೆ. ತರಬೇತಿ ಸಮಯದಲ್ಲಿ 6 ಸಾವಿರ ರೂ. ಸ್ಟೈಫಂಡ್ ನೀಡಲಾಗುತ್ತಿದೆ. ಕಾರ್ಮಿಕರ ಮಕ್ಕಳಿಗೆ ವಿದೇಶದಲ್ಲಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದರು.

ಶಾಸಕ ಅರುಣಕುಮಾರ ಪೂಜಾರ, ವಿಪ ಸದಸ್ಯ ಆರ್. ಶಂಕರ, ಕಾರ್ಮಿಕ ಇಲಾಖೆ ವೈದ್ಯಕೀಯ ನಿರ್ದೇಶಕ ಡಾ. ರವಿಕುಮಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ, ನಗರ ಅರಣ್ಯ ಕೈಗಾರಿಕಾ ನಿಗಮದ ನಿರ್ದೇಶಕಿ ಭಾರತಿ ಜಂಬಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net