ಅತಿವೇಗವಾಗಿ ಬೈಕ್​ ಚಾಲನೆ; ಹಿಂಬದಿ ಸವಾರ ಮೃತ್ಯು

Accident (3)
Published on

ಬೆಂಗಳೂರು: ಮದ್ಯದ ಅಮಲಿನಲ್ಲಿ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ಹೂಡಿಯಲ್ಲಿ ನಡೆದಿದೆ.

ಕೆ.ಆರ್.ಪುರದ ಅಯ್ಯಪ್ಪನಗರ ನಿವಾಸಿ ಆಕಾಶ್(27) ಮೃತ ಹಿಂಬದಿ ಸವಾರ. ಸವಾರ ಪ್ರಸನ್ನ ನಾಯಕ್(23) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ತಲೆಗೆ ಗಂಭೀರ ಪೆಟ್ಟು ಬಿದ್ದಿರುವ ಪರಿಣಾಮ ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಭಾನುವಾರ ಮುಂಜಾನೆ 1:00 ಗಂಟೆ ಸುಮಾರಿಗೆ ಹೂಡಿ ಮೆಟ್ರೋ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯದ ಪಾರ್ಟಿ ಎಫೆಕ್ಟ್​

ತೀರ್ಥಹಳ್ಳಿ ಮೂಲದ ಆಕಾಶ್ ಮತ್ತು ಸಿರಸಿ ಮೂಲದ ಪ್ರಸನ್ನ ನಾಯಕ್ ಇಬ್ಬರೂ ವೃತ್ತಿಯಲ್ಲಿ ಲ್ಯಾಬ್ ಟೆಕ್ನಿಶಿಯನ್. ಸ್ನೇಹಿತರಾಗಿದ್ದ ಇಬ್ಬರೂ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ತಡರಾತ್ರಿವರೆಗೂ ಮದ್ಯದ ಪಾರ್ಟಿ ಮಾಡಿದ್ದರು.

ಮದ್ಯದ ಅಮಲಿನಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುವಾಗ ಮಾರ್ಗ ಮಧ್ಯೆ ಈ ಅವಘಡ ನಡೆದಿದೆ. ಪ್ರಸನ್ನ ನಾಯಕ್ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರರಿಬ್ಬರೂ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ.

ಹೆಲ್ಲೆಟ್ ಧರಿಸದೆ ಸಾವು

ಹೆಲ್ಮೆಟ್ ಧರಿಸದ ಪರಿಣಾಮ ಇಬ್ಬರ ತಲೆಗೂ ಗಂಭೀರ ಪೆಟ್ಟು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಹಿಂಬದಿ ಸವಾರ ಆಕಾಶ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಸವಾರ ಪ್ರಸನ್ನ ನಾಯಕ್‌ಗೆ ಚಿಕಿತ್ಸೆ ಮುಂದುವರಿದಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net