ರಾಶಿ ರಾಶಿ ತ್ಯಾಜ್ಯಕ್ಕೆ ಬೆಂಕಿ!

Kasa1
Published on

* ಬೊಂಬೆನಾಡು ಕಸದಪಟ್ಟಣವಾಗಿ ಮಾರ್ಪಾಡು

* ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಬಿದ್ದಿರುವ ರಾಶಿ ರಾಶಿ ಕಸಕ್ಕೆ ಬೆಂಕಿ

* ವಾಹನ ಸವಾರರಿಗೆ ಸಮಸ್ಯೆ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರದಲ್ಲಿನ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬೆಂಕಿಯ ಮೂಲಕ ಶಮನಗೊಳಿಸುವ ಯತ್ನ ನಡೆಸಲಾಗುತ್ತಿದೆಯೇ?...

ಹೌದು. ನಗರದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿರುವುದು ಇಂತಹುದೊಂದು ಪ್ರಶ್ನೆ ಹುಟ್ಟು ಹಾಕಿದೆ. ಚನ್ನಪಟ್ಟಣ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ತಾರಕ್ಕೇರಿದೆ. ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವಿಲ್ಲದ ಕಾರಣ, ಚೆಂದದಪಟ್ಟಣ ಕಸದಪಟ್ಟಣವಾಗಿ ಹಲವು ವರ್ಷಗಳೇ ಕಳೆದಿವೆ. ಈಗ, ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಪರಿಸರ ಮಾಲಿನ್ಯ ವಿಪರೀತವಾಗುತ್ತಿದೆ. ಆದರೆ, ಈ ವಿಚಾರವಾಗಿ ಸಂಬಂ‘ಪಟ್ಟವರು ಜಾಣ ಕುರುಡು ಪದರ್ಶನ ಮಾಡುತ್ತಿರುವ ಆರೋಪ ಕೇಳಿಬಂದಿವೆ.

ಹೆದ್ದಾರಿಯಲ್ಲಿಯೇ ಬೆಂಕಿ!!

ನಗರದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಬಿದ್ದಿರುವ ರಾಶಿ ರಾಶಿ ಕಸಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಹಾಗೆಯೇ ನಗರದ ಕುಡಿನೀರು ಕಟ್ಟೆಯ ಪಕ್ಕದ ಖಾಲಿ ಜಾಗದಲ್ಲಿ (ಕ್ರೀಡಾಂಗಣಕ್ಕೆ ಮೀಸಲಾದ ಜಾಗ)ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಸುರಿಯಲಾಗಿದ್ದು, ಈ ತ್ಯಾಜ್ಯಕ್ಕೂ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ವ್ಯಾಪಕವಾಗಿ ಹೊಗೆ ಹೊರಬರುತ್ತಿದ್ದು, ಜನತೆಗೆ ಅನಾರೋಗ್ಯ ‘ಭಾಗ್ಯ ಉಚಿತವಾಗಿ ಲಭ್ಯವಾಗುತ್ತಿದೆ. ಈ ಜಾಗವಷ್ಟೇ ಅಲ್ಲದೇ ಹಲವು ಕಡೆಗಳಲ್ಲಿಯೂ ಬೆಂಕಿ ಹಚ್ಚುವ ಕೆಲಸಗಳಾಗುತ್ತಿದ್ದು, ತ್ಯಾಜ್ಯ ವಿಲೇವಾರಿ ತಲೆಬಿಸಿಯಿಂದ ತಪ್ಪಿಸಿಕೊಳ್ಳಲು ನಗರಸಭೆಯೇ ಈ ಬೆಂಕಿಯ ಉಪಾಯ ಹುಡುಕಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಹೆಬಾಗಿಲಲ್ಲೇ ಮಾನ ಹರಾಜು!

ಹಲವು ಕಾರಣಗಳಿಂದ ಚನ್ನಪಟ್ಟಣ ತಾಲೂಕು ಸಾಕಷ್ಟು ಖ್ಯಾತಿ ಪಡೆದಿದೆ. ಆದರೆ, ತ್ಯಾಜ್ಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಡೀ ನಗರಕ್ಕೆ ತ್ಯಾಜ್ಯ ಸಮಸ್ಯೆ ಎಂಬುದು ಕಪ್ಪುಚುಕ್ಕಿಯಂತಾಗಿದೆ. ನಗರದ ಹೆದ್ದಾರಿಯಲ್ಲಿಯೇ ಬೇಕಾಬಿಟ್ಟಿಯಾಗಿ ತ್ಯಾಜ್ಯ ಸುರಿದಿರುವುದು ನಗರದ ಅಂದ ಕೆಡಿಸುತ್ತಿದೆ. ನಗರದ ಹೆಬ್ಬಾಗಿಲು ಎನ್ನಲಾಗುವ ಶೇರ್ವಾ ಸರ್ಕಲ್ ಬಳಿಯೇ ತ್ಯಾಜ್ಯ ಸ್ವಾಗತಿಸುತ್ತಿದೆ. ರಾತ್ರಿ ಹೊತ್ತು ತ್ಯಾಜ್ಯ ಬೆಂಕಿಯ ಹೊಗೆ ರಸ್ತೆಗೆ ರಾಚುತ್ತಿದೆ. ಇಲ್ಲಿ ಬಿದ್ದಿರುವ ತ್ಯಾಜ್ಯ ನಗರದ ಮಾನ ಕಳೆಯುವ ಜತೆಗೆ, ವಾಹನ ಸವಾರರ ಪ್ರಾಣಕ್ಕೂ ಸಂಚಕಾರ ತರುತ್ತಿದೆ. ತ್ಯಾಜ್ಯ ತಿನ್ನಲು ಬೀಡಾಡಿ ಪ್ರಾಣಿಗಳು (ನಾಯಿ, ದನಕರು) ಮುಗಿಬೀಳುತ್ತಿರುವುದು ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.

ದಂಡ ಪ್ರಯೋಗಿಸಲಿ!!!

ಕುಡಿನೀರು ಕಟ್ಟೆ ಬಳಿ ಕೆಲ ಸಾರ್ವಜನಿಕರು ತ್ಯಾಜ್ಯ ಸುರಿದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂಬುದು ನಗರಸಭೆ ಅಧಿಕಾರಿಗಳ ಆರೋಪವಾಗಿದೆ. ಇದನ್ನು ತಡೆಗಟ್ಟಲು ಸಾಕಷ್ಟು ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸುತ್ತಾರೆ. ಇದು ಸತ್ಯವೇ ಆಗಿದ್ದರೆ, ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವಾಗಬೇಕಲ್ಲವೇ? ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆ‘ರಿಸಿ, ಈಗಾಗಲೇ ರಾಜ್ಯ ಸರ್ಕಾರವೂ ಕಸಕ್ಕೆ ಬೆಂಕಿ ಹಚ್ಚುವುದನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದೆ.

ಅದರಂತೆ ಜನವಸತಿ ಪ್ರದೇಶ ಅಥವಾ ಬಯಲು ಜಾಗಗಳಲ್ಲಿ ಕಸಕ್ಕೆ ಬೆಂಕಿ ಇಡುವಂತಿಲ್ಲ. ಸರ್ಕಾರದ ಆದೇಶ ಉಲ್ಲಂಘಿಸಿ ಬೆಂಕಿ ಹಚ್ಚಿದರೆ 5 ಲಕ್ಷ ರೂ.ವರೆಗೆ ದಂಡ ಇಲ್ಲವೇ 5 ವರ್ಷ ಜೈಲು ಮತ್ತು ದಂಡ ಪಾವತಿ ಶಿಕ್ಷೆ ವಿಧಿಸುವ ಅವಕಾಶವಿದೆ. ತ್ಯಾಜ್ಯ ಹಾಕುವ ಜಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ಅಂತಹವರನ್ನು ನಗರಸಭೆ ಪತ್ತೆ ಹಚ್ಚಲಿ ಎಂಬುದು ಪರಿಸರಪ್ರಿಯರ ಆಗ್ರಹವಾಗಿದೆ.

ಕುಡಿನೀರುಕಟ್ಟೆ ಬಳಿ ತ್ಯಾಜ್ಯ ಸುರಿದು ಬೆಂಕಿ ಹಚ್ಚುವ ಕೆಲಸವಾಗುತ್ತಿರುವುದು ನಿಜ. ಇದನ್ನು ತಡೆಗಟ್ಟಲು ಈಗಾಗಲೇ ಆ ಜಾಗಕ್ಕೆ ಯಾರೂ ಹೋಗದಂತೆ ಕಾಲುವೆಯನ್ನು ತೋಡಿಸಿದ್ದೇವೆ. ಆದರೂ, ತ್ಯಾಜ್ಯ ಹಾಕಿ ಬೆಂಕಿ ಹಚ್ಚುತ್ತಿದ್ದಾರೆ. ಶನಿವಾರ ರಾತ್ರಿ ಅಗ್ನಿಶಾಮಕದಳದ ಸಹಾಯದಿಂದ ಬೆಂಕಿ ಆರಿಸಿದ್ದೇವೆ. ಆ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ನಿಗಾವಹಿಸುತ್ತೇವೆ. ಇದರ ಕಡಿವಾಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು.ಮಹೇಂದ್ರ, ಪೌರಾಯುಕ್ತ ಚನ್ನಪಟ್ಟಣ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net