ಕೊಳೆತ ತೊಗಟೆಗಳಿಂದ ದುರ್ವಾಸನೆ : ಸಿದ್ದಿಬೈಲು ಕ್ವಾರಿಯಲ್ಲಿ ಮರಗಳ ತ್ಯಾಜ್ಯ ರಾಶಿ : ಸ್ಥಳೀಯ ಜಲಸಂಪನ್ಮೂಲಕ್ಕೆ ಅಡ್ಡಪರಿಣಾಮ

New Project (19)
Published on

ವಿಜಯವಾಣಿ ಸುದ್ದಿಜಾಲ ಕುಂಬಳೆ

ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಅನಂತಪುರ-ಕಣ್ಣೂರು ರಸ್ತೆಯ ಸಿದ್ದಿಬೈಲು ಎಂಬಲ್ಲಿ ಕ್ವಾರಿಯೊಂದರಲ್ಲಿ ಸಂಗ್ರಹವಾಗಿರುವ ಮರದ ತೊಗಟೆಗಳ ಮೇಲೆ ಮಳೆನೀರು ಬಿದ್ದಿದ್ದರಿಂದ ಕೊಳೆಯಲಾರಂಭಗೊಂಡಿದ್ದು, ಸ್ಥಳೀಯ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ.

ಸೀತಾಂಗೋಳಿ ಕುಂಬಳೆ ರಸ್ತೆಯ ಪೆರ್ನೆ-ಅನಂತಪುರ-ಕಣ್ಣೂರು ರಸ್ತೆಯ ಸಿದ್ದಿಬೈಲು ಪ್ರದೇಶದಲ್ಲಿ ಹತ್ತಾರು ಕುಟಂಬಗಳು ವಾಸಿಸುತ್ತಿವೆ. ಇಲ್ಲಿರುವ ಕೆಂಗಲ್ಲು ಕ್ವಾರಿಗೆ ಮರಗಳ ಬೃಹತ್ ದಿಮ್ಮಿಗಳನ್ನು ತಂದು ಹದಗೊಳಿಸಲಾಗುತ್ತಿದ್ದು, ಮರದ ತೊಗಟೆ ಬೃಹತ್ ರಾಶಿಯಾಗಿ ಸಂಗ್ರಹಗೊಂಡಿದೆ.

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಈ ತೊಗಟೆಗಳೆಲ್ಲವೂ ಕೊಳೆಯಲು ಆರಂಭಗೊಂಡಿದ್ದು, ಸ್ಥಳೀಯ ಪರಿಸರದಲ್ಲಿ ವಿಪರೀತ ದುರ್ವಾಸನೆ ಬೀರಲಾರಂಭಿಸಿದೆ. ಜತೆಗೆ ಕೊಳೆತ ತೊಗಟೆಗಳ ದ್ರವ ಮಣ್ಣಿನಲ್ಲಿ ಮಿಶ್ರಗೊಂಡು ಬಾವಿ, ಕೆರೆ ಸಹಿತ ಸ್ಥಳೀಯ ಜಲಸಂಪನ್ಮೂಲಕ್ಕೆ ಸೇರುವುದರಿಂದ ಕುಡಿಯುವ ನೀರು ಸಂಪೂರ್ಣ ಕಲುಷಿತಗೊಂಡಿದೆ.

ಸೀತಾಂಗೋಳಿಯ ಕಿನ್ಪ್ರಾ ಕೈಗಾರಿಕ ಪ್ರದೇಶ ಸಹಿತ ಸೀತಾಂಗೋಳಿ, ಸೂರಂಬೈಲುಗಳಲ್ಲಿ ಅನೇಕ ಮರದ ಮಿಲ್ಲುಗಳು ಕಾರ್ಯಾಚರಿಸುತ್ತಿದ್ದು, ಕಾಗದಗಳ ಉತ್ಪಾದನೆಗೆ ತೊಡಗಿರುವ ಕೆಲವು ಮಿಲ್‌ಗಳು ಮರದ ಮಾಲಿನ್ಯಗಳನ್ನು ಸೂಕ್ತವಾಗಿ ವಿಲೇವಾರಿಗೊಳಿಸದೆ ಕ್ವಾರಿಗಳಲ್ಲಿ ಎಸೆಯುತ್ತಿದ್ದಾರೆ. ವಿದೇಶಗಳಿಂದ ಆಮದು ಮಾಡಿಕೊಳ್ಳವ ಮರಗಳ ತೊಗಟೆಗಳು ಪರಿಸರಕ್ಕೆ ಹಾನಿಕಾರಕವಾಗಿದ್ದು, ಅವುಗಳನ್ನೂ ಎಲ್ಲೆಂದರದಲ್ಲಿ ಎಸೆಯಲಾಗುತ್ತಿದೆ. ಸ್ಥಳೀಯ ಜಲಸಂಪನ್ಮೂಲವನ್ನು ಶುದ್ಧೀಕರಣಗೊಳಿಸುವ ಕಾರ್ಯವಾಗಬೇಕು ಎಂದು ಸ್ಥಳೀಯರು ಆಡಳಿತ ವರ್ಗಕ್ಕೆ ಒತ್ತಾಯಿಸಿದ್ದಾರೆ.

ಮರದ ವ್ಯಾಪಾರ ಅವ್ಯಾಹತ

ಕೆಲವು ತಿಂಗಳುಗಳಿಂದ ಮರದ ವ್ಯವಹಾರ ಜಿಲ್ಲೆಯಾದ್ಯಂತ ಬಿರುಸಾಗಿ ನಡೆಯುತ್ತಿದ್ದು, ಕಾಡುಗಳನ್ನೇ ಗುತ್ತಿಗೆಗೆ ಪಡೆದು ಮರ ಕಡಿಯುವ ಕಾರ್ಯವೂ ನಡೆಯುತ್ತಿದೆ. ಜತೆಗೆ ಸ್ಥಳೀಯ ರಸ್ತೆಗಳಲ್ಲಿ ಮರದ ಬೃಹತ್ ದಿಮ್ಮಿಗಳನ್ನು ಹೊತ್ತ ಲಾರಿಗಳು ರಾತ್ರಿ ಹಗಲೆನ್ನದೆ ಸತತ ಸಂಚರಿಸುತ್ತಿರುವುದು ಕಂಡುಬರುತ್ತಿದೆ.

ಸಿದ್ದಿಬೈಲು ಪ್ರದೇಶದಲ್ಲಿ ಮರದ ಮಾಲಿನ್ಯ ಸಮಸ್ಯೆ ಗಮನಕ್ಕೆ ಬಂದಿದ್ದು, ಪುತ್ತಿಗೆ ಗ್ರಾಪಂ ಕಾರ್ಯದರ್ಶಿ ಸಹಿತ ಸಂಬಂಧಪಟ್ಟವರು ಈಗಾಗಲೇ ಮಾಲಿನ್ಯದ ಪ್ರದೇಶ ಪರಶೀಲಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪರವಾನಗಿ ರಹಿತ ಉದ್ಯಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾಗರಿಕರ ಹಿತ ರಕ್ಷಣೆ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ನೆಮ್ಮದಿಯಿಂದ ಬದುಕುವ ಹಕ್ಕನ್ನು ಸಂರಕ್ಷಿಸಲಾಗುವುದು. -ಅನಿತಾ, ಪುತ್ತಿಗೆ ಗ್ರಾ.ಪಂ. ಸದಸ್ಯೆ

  • ಮರಗಳ ತೊಗಟೆಗಳ ಅಸಮರ್ಪಕ ವಿಲೇವಾರಿ
  • ಮಳೆನೀರಿಗೆ ಸಿಲುಕಿ ಕೊಳೆತು ತ್ಯಾಜ್ಯ ಉತ್ಪತಿ
  • ಸ್ಥಳೀಯರ ಆರೋಗ್ಯದ ಮೇಲೂ ದುಷ್ಪರಿಣಾಮ
  • ಕಠಿಣ ಕಾನೂನು ಕ್ರಮಕೈಗೊಳ್ಳಲು ಹೆಚ್ಚಿದ ಒತ್ತಾಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net