ಕಸದ ಗುಡ್ಡೆ ಸೇರುತ್ತಿದೆ ಮಾವು

Mavu -Photo -jpg
Published on

ಮಾರುಕಟ್ಟೆಗಳಲ್ಲಿ ಹಣ್ಣು ಕೇಳುವವರೇ ಇಲ್ಲ ಔಷಧ, ಕೂಲಿ ಖರ್ಚು ಸಿಗದೆ ರೈತರ ಪರದಾಟ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಮಾರುಕಟ್ಟೆಗೆ ತಂದ ಮಾವು ಬಿಕರಿಯಾಗದೆ ರೈತರು ಕಸದಗುಡ್ಡೆಗೆ ಸುರಿದು ಹೋಗುತ್ತಿರುವ ಚಿತ್ರಣ ರಾಮನಗರದ ಮಾವು ಮಾರುಕಟ್ಟೆ ಪ್ರದೇಶದಲ್ಲಿ ಕಂಡುಬರುತ್ತಿದೆ.

ಚನ್ನಪಟ್ಟಣ-ರಾಮನಗರದಲ್ಲಿ ಮಾವು ಮಾರುಕಟ್ಟೆಗಳು ಕಳೆದ ಮಾರ್ಚ್‌ನಿಂದ ವ್ಯಾಪಾರ ನಡೆಸುತ್ತಾ ಬಂದಿವೆ. ರೈತರಿಂದ ಬಂದ ಮಾವನ್ನು ವರ್ತಕರು ಖರೀದಿಸಿ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಕಳಿಸುತ್ತಾರೆ. ಮಾವು ಕಾಲದಲ್ಲಿ ಮಾರುಕಟ್ಟೆಗಳು ತುಂಬಿ ತುಳುಕುತ್ತವೆ. ಆದರೆ, ಈ ಬಾರಿ ಫಸಲಿನ ಆವಕ ಇಲ್ಲದೆ ಮಾರುಕಟ್ಟೆಗಳು ಬಣಗುಡುತ್ತಿವೆ.

ವಾತಾವರಣ ಬದಲಾವಣೆ ಈ ಬಾರಿ ರೈತರಿಗೆ ಮಾವು ಸಿಹಿಯಾಗುವ ಬದಲು ಹುಳಿಯಾಗಿದೆ. ಫಸಲಿಲ್ಲದೆ ನಷ್ಟದ ಕಡೆ ಮುಖ ಮಾಡಿದ್ದಾರೆ. ಇದ್ದ ಮಾವಿನಲ್ಲಾದರೂ ಲಾಭ ಕಾಣಬಹುದು, ಔಷಧ, ಒಂದಷ್ಟು ಕೂಲಿಗಾದರೂ ಹಣ ಸಿಗುತ್ತದೆ ಎಂದರೆ ತಂದ ಮಾವನ್ನು ಮಾರುಕಟ್ಟೆಯಲ್ಲಿ ಕೇಳುವವರಿಲ್ಲ.

ಶುಕ್ರವಾರ ರಾಮನಗರದ ಮಾರುಕಟ್ಟೆಗೆ ಮಾವು ತಂದ ರೈತರು ಮಾವು ಕೇಳುವವರಿಲ್ಲದೆ ಬೆಲೆ ಸಿಗದೆ ತಂದ ಮಾವನ್ನು ಕಸದಗುಡ್ಡೆಗೆ ಸುರಿದು ಹೋಗಿದ್ದಾರೆ. ಮಾವು ರಾಶಿಗಳ ಗುಡ್ಡೆಗಳ ಬಳಿ ನೊಣ ಜಿಯ್‌ಗುಡುತ್ತಿವೆ. ಕೊಳೆತ ಹಣ್ಣುಗಳು ಕಸದ ರಾಶಿ ಚಿತ್ರಣ ಬಿಚ್ಚಿಟ್ಟಿವೆ. ರಾಮನಗರದ ಮಾವು ಮಾರುಕಟ್ಟೆ ಪ್ರದೇಶದ ಎರಡೂ ಕಡೆ ಇಂತಹ ಚಿತ್ರಣ ಕಾಣುತ್ತಿದೆ. ತೆಗೆ ಮಾವು ಮಾರಾಟ ಅಂಗಡಿಗಳ ಮುಂದೆ ಮೂಟೆ ಕಟ್ಟಿದ ಚೀಲಗಳು ಹಾಗೇ ಉಳಿದಿವೆ. ರಸ್ತೆ ಬದಿ ಕೂಡ ಅಲ್ಲಲ್ಲಿ ಒಂದಷ್ಟು ಮಾವು ರಾಶಿ ಕಾಣುತ್ತಿವೆ.

ಕಪ್ಪುಕಾಯಿ

ಹೂ ವಿಳಂಬ, ವಾತಾವರಣ ಬದಲಾವಣೆಯಿಂದ ಮಾವು ಫಸಲು ಜಿಲ್ಲೆಯಲ್ಲಿ ವಿರಳವಾಗಿದೆ. ತೆಗೆ ಜೋನಿ ಕೀಟಬಾಧೆಯಿಂದ ಕಪ್ಪು ಅಂಟುದ್ರವ ಕಾಯಿ ಮೇಲೆ ಸುರಿದಿದ್ದರಿಂದ ಮಾವಿನಕಾಯಿಗಳು ಕಪ್ಪಾಗಿ ಮಾರುಕಟ್ಟೆಯಲ್ಲಿ ಕೇಳುವವರಿಲ್ಲದಂತಾಗಿದೆ. ಇದರಿಂದ ರೈತರಿಗೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ.

ವರ್ತಕರು, ವ್ಯಾಪಾರಸ್ಥರು, ಜೂಸ್ ತಯಾರಿಕೆ ಕಾರ್ಖಾನೆಯವರು ಕೂಡ ಇಂತಹ ಕಾಯಿಗಳನ್ನು ಕೊಳ್ಳಲು ಮುಂದೆ ಬರದಿರುವುದೇ ಇದಕ್ಕೆ ಕಾರಣ.

ಮರದಲ್ಲೇ ಹಣ್ಣಾಗಿ ಉದುರುತ್ತಿವೆ

ಒಂದು ಕಡೆ ಮಾವಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ, ಮತ್ತೊಂದೆಡೆ ಕೊಯ್ಲು ಮಾಡಿ ಮಾವು ಮಾರುಕಟ್ಟೆಗೆ ಒಯ್ದರೂ ಮಾವು ಬೆಲೆ ಕೆಜಿಗೆ 3ರೂ. 4ರೂ ಇದೆ. ಇದರಿಂದ ರೈತರು ಮಾವಿನಕಾಯಿ ಕೊಯ್ಲು ಮಾಡದೆ ಇರುವ ಕಾರಣ ಕಾಯಿಗಳು ಮರದಲ್ಲೇ ಹಣ್ಣಾಗಿ ಉದುರುತ್ತಿವೆ.

ನೆಲಕಚ್ಚಿದ ಸೆಂಧೂರ

ಸೆಂಧೂರ ಫಸಲು ಪ್ರತಿವರ್ಷ ಒಂದಷ್ಟು ಲಾಭವನ್ನು ರೈತರಿಗೆ ನೀಡುತ್ತದೆ. ಈ ಬಾರಿ ಒಂದಷ್ಟು ಫಸಲು ರೈತರ ತೋಟದಲ್ಲಿ ಕಂಡು ಸೆಂಧೂರ ಫಸಲಿನಲ್ಲಾದರೂ ಲಾಭ ಕಂಡು ನಷ್ಟದಿಂದ ಪಾರಾಗಬಹುದು ಎಂಬ ಭರವಸೆ ಮೂಡಿಸಿತ್ತು. ತೆಗೆ ಪ್ರಾರಂಭದಲ್ಲಿ 100ರ ಗಡಿ ದಾಟಿದ್ದು ಕಂಡು ರೈತರನ್ನು ಇಮ್ಮಡಿಗೊಳಿಸಿತ್ತು. ಆದರೆ ದಿನೇ ದಿನೇ ಅದರ ಬೆಲೆ ಕುಸಿದು ಇಂದು ಕಸದ ರಾಶಿಗೆ ಸೇರುತ್ತಿದೆ ಎನ್ನುತ್ತಾರೆ ಬೆಳೆಗಾರರು.

ಪ್ರಸ್ತುತ ದರ

ಸೆಂಧೂರ 2 ರಿಂದ 3, 4ರೂ ಇದೆ, ಬಾದಾಮಿ 8 ರಿಂದ 10- 12, ರಸಪೂರಿ 4 ರಿಂದ 5, ತೋತಾಪುರಿ 3 ರಿಂದ 4, ನಾಟಿಕಾಯಿ ಕೇಳುವವರೆ ಇಲ್ಲ. ಇನ್ನೂ ಮಾರುಕಟ್ಟೆಯಲ್ಲಿ ಹಣ್ಣಿನ ದರವೂ ಇಳಿದಿದ್ದು ಹಣ್ಣು ಕೂಡ ಮಾರಾಟ ಆಗುತ್ತಿಲ್ಲ ಎಂಬ ಅಳಲು ವ್ಯಾಪಾರಸ್ಥರದ್ದಾಗಿದೆ.

ರಾಮನಗರ, ಚನ್ನಪಟ್ಟಣದ ಮಾರುಕಟ್ಟೆಯ ಮಾವು ಹೆಚ್ಚಾಗಿ ಹೊರ ರಾಜ್ಯದ ಜೂಸ್ ಕಾರ್ಖಾನೆಗಳಿಗೆ ಹೋಗುತ್ತಿತ್ತು. ತೆಗೆ ಬೇರೆ ಮಾರುಕಟ್ಟೆ ಕಾಯಿ ನಮ್ಮ ಮಾರುಕಟ್ಟೆ ವೇಳೆಗೆ ಬಂದಿರುವ ಕಾರಣ ಈ ಬಾರಿ ಹೊರ ರಾಜ್ಯದವರು ನಮ್ಮ ಮಾರುಕಟ್ಟೆ ಕಾಯಿ ಖರೀದಿಗೆ ಬಂದಿಲ್ಲ. ಇದರಿಂದ ದರ ಕುಸಿದಿದೆ. ನಾವು ರೈತರಿಂದ ಕಾಯಿ ಖರೀದಿ ಮಾಡಲು ಆಗುತ್ತಿಲ್ಲ. ಇದರಿಂದ ರೈತರು ಮತ್ತು ವರ್ತಕರಾದ ನಾವು ಸಮಸ್ಯೆ ಎದುರಿಸುವಂತಾಗಿದೆ.ಹೆಸರು ಹೇಳಲಿಚ್ಚಿಸದ ಮಂಡಿ ವರ್ತಕ, ರಾಮನಗರ.ಮಾವು ನಂಬಿ ರೈತರು ಕೆಟ್ಟಿದ್ದೇವೆ. ಔಷಧ ಖರ್ಚು ಕೂಡ ಕಾಯಿ ಮಾರಾಟದಲ್ಲಿ ಸಿಕ್ಕಿಲ್ಲ. ಮಾರುಕಟ್ಟೆಗೆ ತಂದ ಮಾವು ಕೇಳುವವರಿಲ್ಲದೆ ಕಸದ ಗುಡ್ಡೆಗೆ ಸೇರುವಂತಾಗಿದೆ. ಸಾವಿರಾರು ರೈತರು ಈ ಬಾರಿ ನಷ್ಟದ ಹಾದಿ ತುಳಿದಿದ್ದಾರೆ. ಕೂಡಲೇ ಸರ್ಕಾರ ವಿಮಾ ಸೌಲಭ್ಯ ಇರುವ ರೈತರಿಗೆ ವಿಮಾ ಸೌಲಭ್ಯ, ವಿಮೆ ಇಲ್ಲದ ರೈತರಿಗೆ ನೆರವು ನೀಡಿ ರೈತರ ಕಷ್ಟಕ್ಕೆ ಸ್ಪಂದಿಸಿ ಅಗತ್ಯ ಪರಿಹಾರ ನೀಡಬೇಕು. ಯಕ್ಷರಾಜು, ರೈತ, ತುಂಬೇನಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net