

ಬಸವನಬಾಗೇವಾಡಿ: ತಾಲೂಕಿನಲ್ಲಿ ಸಾಂಕ್ರಾಮಿಕ ರೋಗದಿಂದ ಹಂದಿಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಹಂದಿಗಳ ರಕ್ತದ ಮಾದರಿ ಸಂಗ್ರಹಿಸಿ ಗುರುವಾರ ರೋಗ ಪರೀಕ್ಷೆ ಪ್ರಯೋಗಾಲಕ್ಕೆ ಕಳುಹಿಸಲಾಯಿತು.
ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಬಾಗಲಕೋಟೆಯ ಪ್ರಾದೇಶಿಕ ಪಶು ಸಂಶೋಧನಾಧಿಕಾರಿ ಡಾ. ಶ್ರವಣಕುಮಾರ ಗದ್ದಿ ಅವರು ಹಂದಿಗಳ ರಕ್ತದ ಮಾದರಿ ಸಂಗ್ರಹಿಸಿದರು.
ಕಳೆದೊಂದು ತಿಂಗಳಿಂದ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧಡೆ ಸಂಕ್ರಾಮಿಕ ರೋಗದಿಂದ ಹಂದಿಗಳು ಸಾಯುತ್ತಿರುವ ಕುರಿತು ಹಂದಿಗಳ ಕಾಟದಿಂದ ಮುಕ್ತಿ ಕೊಡಿಸಿ ಎಂಬ ಶಿರ್ಷಿಕೆ ಅಡಿಯಲ್ಲಿ ಡಿ. 9ರ ವಿಜಯವಾಣಿ ದಿನಪತ್ರಿಕೆಯ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.
ಈ ವರದಿಗೆ ಸ್ಪಂದಿಸಿದ ತಾಲೂಕಾ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಡಿ. 9ರಂದು ಹಂದಿ ಸಾಕಾಣಿಕೆಯ ಮಾಲೀಕರಿಗೆ ಔಷಧ ವಿತರಿಸಲಾಗಿತ್ತು.
ಗುರುವಾರ ಬಾಗಲಕೋಟೆಯ ಪ್ರಾದೇಶಿಕ ಪಶು ಸಂಶೋಧನಾಧಿಕಾರಿ ಡಾ. ಶ್ರವಣಕುಮಾರ ಗದ್ದಿ ಅವರು, ಹಂದಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ.
ಹಂದಿ ಸಾವನ್ನಪ್ಪುವ ಕುರಿತು ರಕ್ತ ಪರೀಕ್ಷೆಯಿಂದ ಗೊತ್ತಾಗುತ್ತದೆ. ಈಗಾಗಲೇ ಹಂದಿ ಮಾಲೀಕರಿಗೆ ಲಸಿಕೆ ನೀಡಲಾಗಿದೆ.
ಹಂದಿಗಳ ರಕ್ತ ಮಾದರಿ ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ರೋಗದ ಮಾಹಿತಿ ತಿಳಿದು ಮುಂದಿನ ವೈದ್ಯಕೀಯ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕಾ ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಪಂಚಾಕ್ಷರಿ ಸಂಕ ಮಾಹಿತಿ ನೀಡಿದರು. ನಂತರ ಸತ್ತಿರುವ ಹಂದಿಯನ್ನು ಮರಣೋತ್ತರ ಪರಿಕ್ಷೆ ಮಾಡಲಾಯಿತು.
ಪಶು ವೈದ್ಯಾಧಿಕಾರಿಗಳಾದ ಡಾ. ಎಸ್.ಎಸ್. ಹಾದಿಮನಿ, ಡಾ. ಜುಬೇರ ಗಿರಗಾವಿ, ಡಾ. ಎಸ್.ಬಿ. ಕರಜಗಿ, ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ ಇತರರಿದ್ದರು.