

ಮುದ್ದೇಬಿಹಾಳ: ತಡೆಹಿಡಿಯಲಾಗಿರುವ ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಆದಷ್ಟು ಬೇಗ ಬಿಡುಗಡೆಗೊಳಿಸುವಂತೆ ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ ಅವರು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿದರು.
ಭಾನುವಾರ ಪಟ್ಟಣಕ್ಕೆ ಖಾಸಗಿ ಕಾರ್ಯವೊಂದರ ನಿಮಿತ್ತ ಆಗಮಿಸಿದ್ದ ಅವರನ್ನು ಗುತ್ತಿಗೆದಾರರೊಂದಿಗೆ ಭೇಟಿ ಮಾಡಿದ ಅವರು ಬಿಲ್ ಮಂಜೂರಾಗದೆ ಗುತ್ತಿಗೆದಾರರು ಸಮಸ್ಯೆ ಎದುರಿಸುತ್ತಿರುವುದರ ಚಿತ್ರಣ ಬಿಡಿಸಿಟ್ಟರು.
ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಸಣ್ಣ ಗುತ್ತಿಗೆದಾರರು ತೀರಾ ಸಂಕಷ್ಟಗೊಳಗಾಗುವ ಸಂಭವವಿದೆ. ಮುಂದಿನ ದಿನಗಳಲ್ಲಿ ಗುತ್ತಿಗೆ ಕೆಲಸ ಮಾಡಲು ಕಷ್ಟಕರವಾಗಬಹುದು. ಸಾಲದ ರೂಪದಲ್ಲಿ ಹಿಂದೆ ತಂದಿದ್ದ ಹಣಕ್ಕೆ ಬಡ್ಡಿ ಕಟ್ಟುವುದು ಸಾಧ್ಯವಾಗದೆ ಪೇಚಾಡುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರಕ್ಕೆ ನಿವೃತ್ತ ಇಂಜಿನಿಯರ್ ಪಾಟೀಲ ಒತ್ತಾಯ
ನಿಜವಾಗಿಯೂ ನಿಯಮದ ಅನುಸಾರ ಕೆಲಸ ಮಾಡಿರುವ ಗುತ್ತಿಗೆದಾರರ ಬಿಲ್‌ಗೆ ತಡೆ ನೀಡದೆ ಮಂಜೂರು ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.
ಸಚಿವರನ್ನು ಅಸ್ಕಿ ಫೌಂಡೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಕಾಂಗ್ರೆಸ್ ಹಿರಿಯ ಮುಖಂಡರಾದ ವೈ.ಎಚ್. ವಿಜಯಕರ, ವೈ.ವೈ. ಚಲವಾದಿ, ಪಿಕೆಪಿಎಸ್ ನಿರ್ದೇಶಕ ವಿರೇಶಗೌಡ ಅಸ್ಕಿ, ರಾಮನಗೌಡ ಹೊಸಮನಿ, ನಾಗರಾಜ ಕನ್ನೊಳ್ಳಿ, ಪವನ ಧನ್ನೂರ, ಕಾರ್ಯನಿರ್ವಾಹಕ ಅಭಿಯಂತರ ಬಿ.ಟಿ. ದೊಡಮನಿ, ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರು ಇದ್ದರು.