More

    ಸರ್ಕಾರಕ್ಕೆ ನಿವೃತ್ತ ಇಂಜಿನಿಯರ್ ಪಾಟೀಲ ಒತ್ತಾಯ

    ಮುದ್ದೇಬಿಹಾಳ: ರೈತರ ಪ್ರಮುಖ ಬೇಡಿಕೆಯಾಗಿರುವ ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ಗೆ ಏರಿಸಬೇಕು ಮತ್ತು ನಾರಾಯಣಪುರ, ಆಲಮಟ್ಟಿ ಜಲಾಶಯಗಳ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಲು ಪ್ರತಿವರ್ಷ ಕನಿಷ್ಠ 5ಸಾವಿರ ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಪ್ರಗತಿಪರ ರೈತ, ನಿವೃತ್ತ ಇಂಜಿನಿಯರ್, ನೀರಾವರಿ ತಜ್ಞ ಬಿ.ಬಿ. ಪಾಟೀಲ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಸಕ್ತ ಬೆಳಗಾವಿ ಅಧಿವೇಶನದಲ್ಲಿಯೇ ಈ ಕುರಿತು ಚರ್ಚಿಸಿ ತೀರ್ಮಾನಿಸಬೇಕು. ನಮ್ಮ ಭಾಗದ ಶಾಸಕರು ಸರ್ಕಾರದ ಮೇಲೆ ಪಕ್ಷಾತೀತವಾಗಿ ಒತ್ತಡ ಹೇರಬೇಕು. ಎರಡೂ ಜಲಾಶಯಗಳಿಂದ ಸಾಕಷ್ಟು ಫಲವತ್ತಾದ ಜಮೀನು ಮುಳುಗಡೆಯಾಗಿದೆ.

    ಷ್ಟೋ ರೈತರು ನಿರಾಶ್ರಿತರಾಗಿದ್ದು ಸಮಯಕ್ಕೆ ಬಾರದ ಪರಿಹಾರದಿಂದ ನಿರ್ಗತಿಕರಾಗಿದ್ದಾರೆ. ಉಚಿತ ಗ್ಯಾರಂಟಿ ನೀಡುವ ಸರ್ಕಾರಕ್ಕೆ ಇದೇನೂ ಹೊರೆ ಎನ್ನಿಸುವುದಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಕಡಲೆಕಾಯಿ ಪರಿಷೆ; ಬಡವರ ಬಾದಾಮಿ ಶೇಂಗಾ ಆರೋಗ್ಯ ಪ್ರಯೋಜನಗಳು ಇಂತಿದೆ

    ಕೃಷ್ಣಾ ನ್ಯಾಯಾಧೀಕರಣ- 2ರ ಐತೀರ್ಪಿನ ಅನ್ವಯ ಯುಕೆಪಿ 3ನೇ ಹಂತದಡಿ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀ ದಿಂದ 524.256 ಮೀ ವರೆಗೆ ಹೆಚ್ಚಿಸಬೇಕು. ಕೃಷ್ಣಾ ನ್ಯಾಯಾಧೀಕರಣ-2ರ ಐತೀರ್ಪಿನ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಕೂಡಲೇ ಹೊರಡಿಸಿ ಹೆಚ್ಚುವರಿಯಾಗಿ ದೊರೆಯುವ 170 ಟಿಎಂಸಿ ನೀರನ್ನು ಯುಕೆಪಿ 3ನೇ ಹಂತಕ್ಕೆ ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು.

    ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಎಲ್ಲ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಆಲಮಟ್ಟಿ, ನಾರಾಯಣಪುರ ವ್ಯಾಪ್ತಿಯ ಎಲ್ಲ ಏತ ನೀರಾವರಿ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು.

    ಯುಕೆಪಿ ಯೋಜನೆಯಡಿ ಜಮೀನು ಕಳೆದುಕೊಂಡ ರೈತರಿಗೆ ಎಕರೆಗೆ 25 ಲಕ್ಷ ರೂಪಾಯಿಗಳಂತೆ ಪರಿಹಾರ ಒದಗಿಸಬೇಕು. ಸರ್ಕಾರಿ ಹುದ್ದೆಗಳಲ್ಲಿ ಸಂತ್ರಸ್ತ ಕುಟುಂಬದವರಿಗೆ ನೇರ ನೇಮಕಕ್ಕೆ ಅವಕಾಶ ಕಲ್ಪಿಸಬೇಕು. ಮುಖ್ಯಕಾಲುವೆಯ ವಿತರಣಾ ಕಾಲುವೆಗಳಲ್ಲಿ ನೀರು ನಿರ್ವಹಣೆ ಮಾಡಲು ಪ್ರತಿ 20 ಕಿಮೀಗೆ ಒಬ್ಬರಂತೆ ನೀರುಗಂಟಿಗಳನ್ನು ನೇಮಿಸಬೇಕು.

    ಜಲಾಶಯ ವ್ಯಾಪ್ತಿಯ ಜಮೀನುಗಳಲ್ಲಿ ಈಗ ಆರ್ಥಿಕ ಬೆಳೆ ಬೆಳೆಯಲು ಅವಕಾಶವಿಲ್ಲ. ಜೋಳ ಹಾಗೂ ಸಜ್ಜೆ ಬೆಳೆಯಲು ಮಾತ್ರ ಅವಕಾಶವಿದೆ. ಇದನ್ನು ಗಂಭಿರವಾಗಿ ಪರಿಗಣಿಸಿ ಈಗಿರುವ ಮುಖ್ಯ ಕಾಲುವೆಗಳ ವಿನ್ಯಾಸವನ್ನು ಹೆಚ್ಚು ಮಾಡಿ ಆರ್ಥಿಕ ಬೆಳೆಗಳಾದ ಕಬ್ಬು, ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆ ಬೆಳೆಯಲು ಅನುಮತಿ ನೀಡಬೇಕು. ಎಲ್ಲ ಕಾಲುವೆಗಳಿಗೆ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಬೇಕು.

    ಈ ಬೇಡಿಕೆ ಈಡೇರಿಸದಿದ್ದರೆ ಸಂತ್ರಸ್ತ ರೈತರು ಮತ್ತು ನೀರಾವರಿ ತಜ್ಞರನ್ನು ಸಂಘಟಿಸಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts