

ನಾಗಮಂಗಲ: ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವ್ಯಸನಗಳಿಗೆ ಹೆಚ್ಚು ದಾಸರಾಗುತ್ತಿದ್ದು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಎಲ್ಲರೂ ಮಾದಕ ವಸ್ತುಗಳಿಂದ ದೂರವಿರಿ ಎಂದು ನಾಗಮಂಗಲ ಗ್ರಾಮಾಂತರ ಠಾಣೆ ಪಿಎಸ್‌ಐ ರವಿಕುಮಾರ್ ಸಲಹೆ ನೀಡಿದರು.
ತಾಲೂಕಿನ ದೇವಲಾಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಸಕಾಲದಲ್ಲಿ ಅರಿವು ಮೂಡಿಸಿ ಮುಕ್ತಿಗೊಳಿಸಬೇಕಾದ ಅನಿವಾರ್ಯತೆ ಹೆಚ್ಚಿದೆ. ಮಾದಕಗಳು ಮಾನಸಿಕ, ದೈಹಿಕವಾಗಿ ವ್ಯಕ್ತಿಯನ್ನು ದುರ್ಬಲಗೊಳಿಸುತ್ತವೆ. ಇದರಿಂದ ಸಮಾಜಘಾತುಕ ಕೃತ್ಯಗಳು ಹೆಚ್ಚಾಗುತ್ತಿದ್ದು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿವೆ. ಯುವಕರನ್ನು ಸರಿ ದಾರಿಗೆ ತರುವಲ್ಲಿ ಹಿರಿಯರು ನಿರಂತರ ಪ್ರಯತ್ನದಲ್ಲಿದ್ದರೂ ಫಲಕಾರಿಯಾಗದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಎನ್.ಸಿ.ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಜಾಗೃತರಾಗಬೇಕು. ತಮ್ಮ ಸುತ್ತಲಿನ ಪ್ರದೇಶಗಳ ಜನರಲ್ಲಿ ಜಾಗೃತಿ ಮೂಡಿಸಿ ಎಂದರು.
ದೇವಲಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿ ಪ್ರಮುಖ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರಿವು ಮೂಡಿಸಿದರು. ಪ್ರಾಂಶುಪಾಲರಾದ ನಂಜಮ್ಮಣ್ಣಿ, ಶಿಕ್ಷಕರಾದ ಗಿರೀಶ್, ನೂರ್ ಅಫ್ರೋಜ್, ನಾಗೇಂದ್ರ, ಇಂದ್ರೇಶ್, ನವೀನ್, ಶ್ಯಾಮಲಾ, ಸೌಮ್ಯಾ, ಕಾಂತರಾಜು, ಯೋಗೇಶ್ ಉಪಸ್ಥಿತರಿದ್ದರು.