ಫಂಡರಪುರ ವಿಠ್ಠಲನಿಗೆ ಉಘೇ ಉಘೇ

29Anand2
Published on

ಆನಂದ ಭಮ್ಮನ್ನವರ ಚಿಕ್ಕೋಡಿ

ಆಷಾಢ ಏಕಾದಶಿಗೆ ಫಂಡರಪುರ ವಿಠ್ಠಲನ ದರ್ಶನಕ್ಕೆ ಭಕ್ತ ಸಾಗರವೇ ಮಹಾರಾಷ್ಟ್ರದ ಫಂಡರಪುರ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿದೆ. ಕರ್ನಾಟಕದ ಬಹುತೇಕ ಜಿಲ್ಲೆ ಭಕ್ತರು ವಿಠ್ಠಲನ ದರ್ಶನಕ್ಕೆ ಜಿಲ್ಲೆಯ ಗೋಟುರ&ವಿಜಯಪುರ ರಸ್ತೆ ಮಾರ್ಗವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಫಂಡರಪುರ ವಿಠ್ಠಲನ ಸನ್ನಿಧಿಯಲ್ಲಿ ಆಷಾಢ ಏಕಾದಶಿ ದಿನ ನಡೆಯುವ ವಿಶೇಷ ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತಪಡೆ ಫಂಡರಪುರಕ್ಕೆ ಆಗಮಿಸುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಿಂದ 25 ಲಕ್ಷ ಭಕ್ತರು ಸೇರುವ ಸಾಧ್ಯತೆಯಿದ್ದು, ಭಕ್ತರಿಗಾಗಿ ಮಹಾರಾಷ್ಟ್ರ ಸರ್ಕಾರ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ವಾರಕರಿ ಪರಂಪರೆ: ಪಾದಯಾತ್ರೆಯಲ್ಲಿ ಫಂಡರಪುರಕ್ಕೆ ತೆರಳುವ ಭಕ್ತರನ್ನು ವಾರಕರಿ ಪರಂಪರೆಯವರು ಎಂದು ಕರೆಯುತ್ತಾರೆ. ವಾರಕರಿಗಳು ತುಳಸಿ ಮಾಲೆ ಧರಿಸಿ, ಪ್ರೀತಿ, ತ್ಯಾಗ, ಮಮತೆ, ಅಹಿಂಸೆ, ಮಾನವೀಯತೆ, ಕ್ಷಮಾಗುಣ ಅಳವಡಿಸಿಕೊಂಡು ಸಾತ್ವಿಕ ಜೀವನ ನಡೆಸಬೇಕು ಎಂದು ದೀಕ್ಷೆ ಪಡೆದವರಾಗಿರುತ್ತಾರೆ.

ಸಕಲ ವ್ಯವಸ್ಥೆ: ಜು. 6ರಂದು ಆಷಾಢ ಏಕಾದಶಿಯಂದು ವಿಠ್ಠಲ&ರುಕ್ಮಿಣಿ ದೇವಸ್ಥಾನದ ಬಳಿ ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ಭೀಮಾ ನದಿ( ಚಂದ್ರಭಾಗ)ಯಲ್ಲಿ ಪುಣ್ಯಸ್ನಾನ ಮಾಡಿ ವಿಠ್ಠಲನ ದರ್ಶನ ಪಡೆಯುತ್ತಾರೆ. ಈ ಬಾರಿ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆಯಿದ್ದು, ಯಾವುದೇ ತೊಂದರೆಯಾಗದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ, ಪ್ರತಿ ನಿಮಿಷಕ್ಕೆ 60 ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಶೆಲ್ಕೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net