ಪಿಎಫ್‌ಐನಿಂದ ಹತ್ಯೆಗೆ ಹಿಟ್ ಲಿಸ್ಟ್ ತಯಾರಿ : ಎನ್‌ಐಎಯಿಂದ ನ್ಯಾಯಾಲಯಕ್ಕೆ ವರದಿ

Published on

ಕಾಸರಗೋಡು: ನಿಷೇಧಿತ ಸಂಘಟನೆಯಾದ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯ(ಪಿಎಫ್‌ಐ) ಕೇರಳದಲ್ಲಿ ಸಂಘ ಪರಿವಾರದ 950 ಮಂದಿಯ ಹತ್ಯೆಗೆ ಹಿಟ್ ಲಿಸ್ಟ್ ತಯಾರಿಸಿರುವ ಆತಂಕಕಾರಿ ವರದಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಎನ್‌ಐಎ ಈಗಾಗಲೇ ಬಂಧಿಸಿರುವವರನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಈ ಮಾಹಿತಿ ಬದಲಾಗಿದೆ. ಹಿಟ್‌ಲಿಸ್ಟ್‌ನಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿರುವವರ ವಿವರ ಅಲ್ಲದೇ ನ್ಯಾಯಾಧೀಶರೊಬ್ಬರ ಹೆಸರು ಇದೆ. ಎನ್‌ಐಎ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಜಾಮೀನು ನೀಡಬೇಕೆಂಬ ಮನವಿ ಪರಿಗಣಿಸುವ ಮಧ್ಯೆ ಹತ್ಯೆಗೆ ತಯಾರಿಸಿದ್ದ ಹಿಟ್ ಲಿಸ್ಟ್‌ನ ಮಾಹಿತಿ ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಿದ್ದರು.

ಪಿಎಫ್‌ಐ ಚಟುವಟಿಕೆ, ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರು, ತಡೆಯಾಗಿದ್ದವರ ಹೆಸರು ಈ ಹಿಟ್ ಲಿಸ್ಟಿನಲ್ಲಿತ್ತು ಎನ್ನಲಾಗಿದೆ. ಎನ್‌ಐಎ ಬಂಧಿಸಿದ್ದ ಕೇರಳದ ಸಿರಾಜುದ್ದೀನ್ ಎಂಬಾತ 240 ಮಂದಿಯ ಹಿಟ್ ಲಿಸ್ಟ್ ತಯಾರಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಉಳಿದಂತೆ ಪ್ರಸಕ್ತ ತಲೆಮರೆಸಿಕೊಂಡಿರುವ ಅಬ್ದುಲ್ ವಹದ್ ಅವರಿಂದ 5, ಇನ್ನೋರ್ವನಿಂದ 232, ಅಯೂಬ್ ಎಂಬಾತನಿಂದ 500 ಮಂದಿಯ ಹೆಸರಿರುವ ಪಟ್ಟಿಯ ಬಗ್ಗೆ ಮಾಹಿತಿ ಲಭಿಸಿದೆ. ಜಾಮೀನು ಅರ್ಜಿ ಸಲ್ಲಿಸಿದ್ದ ನಾಲ್ವರು ಆರೋಪಿಗಳು ತಾವು ನಿರಪರಾಧಿಗಳೆಂದು ವಾದಿಸಿದ್ದರು. ಆದರೆ ಎನ್‌ಐಎ ವರದಿ ಹಿನ್ನೆಲೆಯಲ್ಲಿ ಆರೋಪಿಗಳ ಜಾಮೀನು ಅರ್ಜಿ ವಾದವನ್ನು ಹೈಕೋರ್ಟ್ ತಡೆ ಹಿಡಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net